ತುಮಕೂರು ಎಚ್‌ಎಎಲ್ ಹೆಲಿಕಾಪ್ಟರ್ ಘಟಕಕ್ಕೆ ಹಸಿರು ನಿಶಾನೆ
ತುಮಕೂರು, ಸೆ.6 : ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ತುಮಕೂರಿನಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆ ಮಾಡಲು ಪರಿಸರ, ಅರಣ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಘಟಕ ಆರಂಭವಾದರೆ ಸುಮಾರು 4 ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಘಟಕ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಯೋಜನೆಗೆ ಅನುಮತಿ ನೀಡಲಾಗಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯ ಸಮಿತಿ ಯೋಜನೆಗೆ ಒಪ್ಪಿಗೆ ನೀಡಿ ಸಚಿವಾಲಯಕ್ಕೆ ವರದಿ ಕಳುಹಿಸಲಾಗಿದೆ.

ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಲಘು ಹೆಲಕಾಪ್ಟರ್ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಘಟಕ ಸ್ಥಾಪನೆಗೆ ಬೀದರ್ ಮತ್ತು ತುಮಕೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ತುಮಕೂರನ್ನು ಅಂತಿಮಗೊಳಿಸಲಾಗಿತ್ತು..
ಸುಮಾರು 610 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಘಟಕ ನಿರ್ಮಾಣವಾಗಲಿದೆ. ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಸುಮಾರು 6300 ಕೋಟಿ ವೆಚ್ಚದಲ್ಲಿ ಈ ಘಟಕ ನಿರ್ಮಾಣ ವಾಗುತ್ತಿದೆ.
ವರ್ಷಕ್ಕೆ 75ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಸಾಮರ್ಥ್ಯದ ಘಟಕ ನಿರ್ಮಾಣವಾಗಲಿದೆ. ಜೊತೆಗೆ ಬಿಡಿಭಾಗಗಳ ಜೋಡಣೆ, ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ, ಟೌನ್ ಶಿಪ್ ಅನ್ನು ಘಟಕ ಒಳಗೊಂಡಿರುತ್ತದೆ.
3000 ಕೆಜಿ ತೂಕದ ಲೈಟಿ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. 5 ರಿಂದ 6 ಜನರು ಪ್ರಯಾಣ ಮಾಡಬಹುದಾದ ಹೆಲಿಕಾಪ್ಟರ್‌ಗಳನ್ನು ಭೂ ಮತ್ತು ವಾಯು ಸೇನೆ ಬಳಸಲಿವೆ. 2018-19ರ ವೇಳೆಗೆ ಇಲ್ಲಿ ಉತ್ಪಾದನೆಯಾಗುವ ಹೆಲಿಕಾಪ್ಟರ್ ಸೇನೆಗೆ ಸೇರುವ ಸಾಧ್ಯತೆ ಇದೆ.












Click it and Unblock the Notifications