ತುಮಕೂರು : ಮೂರು ದಿನಗಳ ಸಂಭ್ರಮದ ದಸರಾ
ತುಮಕೂರು, ಅ.9: ನಾಡಹಬ್ಬ ದಸರಾ ಸಂಭ್ರಮವನ್ನು ಅ.12 ರಿಂದ 14 ರವರೆಗೆ ನಗರದಲ್ಲಿ ಆಚರಿಸಲಾಗುತ್ತದೆ. 21ನೇ ವಿಜಯದಶಮಿ ಸಾಂಸ್ಕತಿಕ ನಾಡಹಬ್ಬವನ್ನು ವೈಭವಪೂರ್ಣವಾಗಿ ಆಚರಿಸಲು ದಸರಾ ಸಮಿತಿ ಸಜ್ಜಾಗಿದೆ. ಮೂರು ದಿನಗಳ ನಾಡಹಬ್ಬದ ಅಂಗವಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಬ್ಬಕ್ಕೆ ಚಾಲನೆ ದೊರೆಯಲಿದೆ.
ಶನಿವಾರ ಸಂಜೆ 6.30ಕ್ಕೆ ಸಾಂಸ್ಕತಿಕ ದಸರಾ ಉತ್ಸವಕ್ಕೆ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ವಿಶ್ವನಾಥ್ ಚಾಲನೆ ನೀಡುವರು. ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೋರಿ ಮಂಜುನಾಥ್ 3 ದಿನಗಳ ದಸರಾ ಉತ್ಸವದ ಮಾಹಿತಿ ನೀಡಿದರು.
ಸಮಿತಿ ಕಾರ್ಯಾಧ್ಯಕ್ಷ ಕೋರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಉತ್ಸವ ನಡೆಯಲಿದೆ. ಸಂಸದ ಜಿ.ಎಸ್.ಬಸವರಾಜು, ನಗರಸಭೆ ಅಧ್ಯಕ್ಷೆ ಗೀತಾ, ಶಾಸಕ ಕೆ.ರಫೀಕ್ ಅಹ್ಮದ್, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಸಂಸ್ಕಾರ ಭಾರತಿ ರಾಜ್ಯ ಕಾರ್ಯದರ್ಶಿ ಶ್ರೀಲತಾ, ಜಿಪಂ ಅಧ್ಯಕ್ಷೆ ಪ್ರೇಮಾ, ಸಮಿತಿ ಉಪಾಧ್ಯಕ್ಷ ಎಂ.ಎಸ್.ವೆಂಕಟಾಚಲ, ಎಸ್‍ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ ಉಪಸ್ಥಿತರಿರುವರು.
ಇದಕ್ಕೂ ಮುನ್ನ ಬೆಳಗ್ಗೆ 7ಕ್ಕೆ ರಸ್ತೆ ಓಟ ಸ್ಪರ್ಧೆಯನ್ನು ಮಾಜಿ ಶಾಸಕ ಎಸ್.ಶಿವಣ್ಣ ಉದ್ಘಾಟಿಸುವರು. ಸಂಜೆ 5.30ಕ್ಕೆ ವೇದಾಂತ ಭಾರತೀ ಸಹಯೋಗದಲ್ಲಿ ಸಾಮೂಹಿಕ ಸೌಂದರ್ಯ ಲಹರೀ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಸಂಜೆ 6ಕ್ಕೆ ಮಂಗಳೂರಿನ ಸನಾತನ ನೃತ್ಯಾಲಯದ ಕಲಾವಿದರಿಂದ ರಾಷ್ಟ್ರದೇವೋಭವ ನೃತ್ಯರೂಪಕ ಆಯೋಜಿಸಲಾಗಿದೆ.

ನಾಡಹಬ್ಬ: ಅ.13 ರಂದು ಸಂಜೆ 5.30ಕ್ಕೆ ನಾಡಹಬ್ಬವನ್ನು ಕಸಾಪ ಜಿಲ್ಲಾಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅಧ್ಯಕ್ಷತೆವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತ, ಟೂಡಾ ಆಯುಕ್ತ ಬಿ.ಟಿ.ರಂಗಸ್ವಾಮಿ, ಜಿಪಂ ಸಿಇಒ ಗೋವಿಂದರಾಜು, ನಗರಸಭೆ ಆಯುಕ್ತ ಅಶಾದ್ ಆರ್.ಷರೀಫ್, ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಬಾಲಶೇಖರ್, ದಸರಾ ಸಮಿತಿಯ ಆರ್.ಎ.ಸುರೇಶ್, ಬಿ.ಎಸ್.ಮಂಜುನಾಥ್, ಸಿಐಟಿ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಗಣೇಶ್ ಉಪಸ್ಥಿತರಿರುವರು.
ದೇಹದಾರ್ಢ್ಯ ಸ್ಪರ್ಧೆ: ಸಂಜೆ 6ಕ್ಕೆ ಜಿಲ್ಲಾಮಟ್ಟದ ದೇಹದಾಢ್ರ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ನಂತರ ಸಾಯಿರಾಮನ್ ನೃತ್ಯ ಕೇಂದ್ರದಿಂದ ಸಂಜೆ 7ಕ್ಕೆ ಸಾಂಸ್ಕತಿಕ ಕಾರ್ಯಕ್ರಮ ಇದೆ.
ವಿಜಯದಶಮಿ ಮೆರವಣಿಗೆ: ಅ.14 ರಂದು ಮಧ್ಯಾಹ್ನ 1ಕ್ಕೆ ನಡೆಯಲಿರುವ ವಿಜಯದಶಮಿ ಮೆರವಣಿಗೆಯ ನೇತೃತ್ವವನ್ನು ಬಳ್ಳಾರಿಯ ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸುವರು. ಮೆರವಣಿಗೆಯನ್ನು ಹಿರಿಯ ಸಾಹಿತಿ ಕವಿತಾಕೃಷ್ಣ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಧ್ವಜಪೂಜೆ, ಎಸ್ಪಿ ರಮಣ್ ಗುಪ್ತ ಗಣಪತಿ ಪೂಜೆ, ಮಾಜಿ ನಗರಸಭಾ ಸದಸ್ಯ ನರಸೀಯಪ್ಪ ಚಾಮುಂಡೇಶ್ವರಿ ಪೂಜೆ ನೆರವೇರಿಸುವರು.
ಮೆರವಣಿಗೆ ಮಾರ್ಗ: ನಗರಸಭೆ ಆವರಣದಿಂದ ಆರಂಭವಾಗಲಿರುವ ವಿಜಯದಶಮಿ ಮೆರವಣಿಗೆ ಗಾಯತ್ರಿ ಚಿತ್ರಮಂದಿರ ಮೂಲಕ ಎಂಜಿ ರಸ್ತೆ, ಗುಂಚಿಚೌಕ, ಹೊರಪೇಟೆ, ಜೆಸಿ ರಸ್ತೆ, ಜೂನಿಯರ್ ಕಾಲೇಜು ಮೈದಾನ ತಲುಪಲಿದೆ. ಮೆರವಣಿಗೆ ನಾಡಿನ ಸುಪ್ರಸಿದ್ಧ ಜನಪದ ಮತ್ತು ಸಾಂಸ್ಕತಿಕ ಕಲಾ ತಂಡಗಳು ಮತ್ತಷ್ಟು ಮೆರಗು ನೀಡಲಿವೆ.
ಶಮೀಪೂಜೆ: ಸಂಜೆ 4ಕ್ಕೆ ಸಾಮೂಹಿಕ ಶಮೀಪೂಜಾ ಸಮಾರಂಭ ನಡೆಯಲಿದೆ.ಬಳ್ಳಾರಿಯ ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡುವರು. ತಹಶೀಲ್ದಾರ್ ಏಕೇಶ್ ಬಾಬ, ಸಾಮಾಜಿಕ ಕಾರ್ಯಕರ್ತ ವಿನಯಬಿದರೆ ಉಪಸ್ಥಿತರಿರುವರು.
ಚಿ.ನಾ.ಹಳ್ಳಿ ತಾಲೂಕು ಹುಳಿಯಾರಿನ ವಿದ್ಯಾವಾರಿಧಿ ಯುವತಿ ಮಂಡಳಿ ಸದಸ್ಯರಿಂದ ಜನಪದ ವೈಭವ, ಸಂಜೆ 6ಕ್ಕೆ ಸಂಗೀತ ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಭಕ್ತಿ ರಂಜನಿ ಕಾರ್ಯಕ್ರಮ ನಡೆಸಿಕೊಡುವರು. 3 ದಿನ ರಾತ್ರಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಇರಲಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಕೆ.ಎಸ್.ವಿಶ್ವನಾಥ್, ಕಾರ್ಯದರ್ಶಿ ಬಿ.ಎಸ್.ಮಹೇಶ್, ವಿಜಯಕುಮಾರ್, ಕೆ.ಪಿ.ಮಹೇಶ್, ಮಲ್ಲಿಕಾರ್ಜುನ್, ಜಿ.ಕೆ.ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications