ಅನುಮತಿ ಇಲ್ಲದಿದ್ರು ಹಾಸ್ಟೆಲ್ ಪ್ರಾರಂಭಿಸಿ. 3 ವಿದ್ಯಾರ್ಥಿಗಳ ಪ್ರಾಣ ತಗೊಂಡ್ರು
ತುಮಕೂರು, ಮಾರ್ಚ್. 09 : ಮೂವರು ವಿದ್ಯಾರ್ಥಿಗಳ ಪ್ರಾಣವನ್ನು ಬಲಿ ಪಡೆದಿರುವ ಚಿಕ್ಕನಾಯಕನ ಹಳ್ಳಿಯ ಹುಳಿಯಾರಿನಲ್ಲಿನ ವಿದ್ಯಾವಾರಿಧಿ ಶಾಲೆಗೆ ಕೇವಲ ಸಿಬಿಎಸ್ಸಿ ಪಠ್ಯಕ್ಕನುಗುಣವಾಗಿ ನಡೆಸಿಕೊಂಡು ಹೋಗಲು ಅನುಮತಿಯಿತ್ತೆ ಹೊರೆತು ವಸತಿ ಶಾಲೆ ನಡೆಸಲು ಅನುಮತಿ ಇರಲಿಲ್ಲ.
ಆದರೆ, ನಿಯಮಗಳನ್ನು ಗಾಳಿ ತೂರಿ ಈ ಶಾಲೆಯ ಆಡಳಿ ಮಂಡಳಿ ಕಳೆದ ಮೂರು ವರ್ಷಗಳಿಂದ ಹಾಸ್ಟೆಲ್ ಸೌಲಭ್ಯವನ್ನು ಪ್ರಾರಂಭಿಸಿ ಇದೀಗ ಮೂವರು ವಿದ್ಯಾರ್ಥಿಗಳ ಪ್ರಾಣವನ್ನು ಬಲಿ ಪಡೆದಿದ್ದಾರೆ.
ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. [ಬ್ರೇಕಿಂಗ್ ನ್ಯೂಸ್: ಹುಳಿಯಾರ್ ಶಾಲೆಯಲ್ಲಿ 3 ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು]

ಖಾಸಗಿ ವಸತಿಶಾಲೆಯಲ್ಲಿ 3 ಮಕ್ಕಳು ಸಾವಿಗೀಡಾದ ಘಟನೆ ಆಘಾತ ತಂದಿದೆ. ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ದ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹುಳಿಯಾರಿನ ಖಾಸಗಿ ವಸತಿಶಾಲೆಯಲ್ಲಿ 3 ಮಕ್ಕಳು ಸಾವಿಗೀಡಾದ ಘಟನೆ ಆಘಾತ ತಂದಿದೆ. ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ದ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕ ಸೂಚಿಸಿದ್ದೇನೆ.
— CM of Karnataka (@CMofKarnataka) March 9, 2017
ತುಮಕೂರಿನ ಚಿಕ್ಕನಾಯಕನ ಹಳ್ಳಿಯ ಹುಳಿಯಾರಿನಲ್ಲಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ಐವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದರು.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.
ಮೃತ ವಿದ್ಯಾರ್ಥಿಗಳನ್ನು ಶಾಂತಮೂರ್ತಿ, ಆಕಾಂಕ್ಷ ಪಲ್ಲಕ್ಕಿ ಮತ್ತು ಶ್ರೇಯಸ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಾಲೆಯ ಮಾಲಕ ಹಾಗೂ ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್ ಅವರನ್ನು ಬಂಧಿಸಿದ್ದಾರೆ.












Click it and Unblock the Notifications