ಚಿಕ್ಕನಾಯಕನಹಳ್ಳಿ: ಸುರೇಶ್ ಬಾಬುಗೆ ಮಣೆ ಹಾಕಿದ ಮತದಾರ, ಸೋಲು ಕಂಡ ಸಚಿವ ಜೆಸಿ ಮಾಧುಸ್ವಾಮಿ!
ತುಮಕೂರು, ಮೇ 13: ಸಚಿವ, ಹಾಲಿ ಶಾಸಕ ಜೆಸಿ ಮಾಧುಸ್ವಾಮಿಗೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಂಟಾಗಿದೆ. ಕ್ಷೇತ್ರದಲ್ಲಿ ತಮಗೆ ಸರಿಸಾಟಿಯಾದ ಪ್ರತಿಸ್ಪರ್ಧಿಯಿಲ್ಲ ಎಂದು ಜೆಡಿಎಸ್‌ನ ಬಿಸಿ ಸುರೇಶ್ ಬಾಬು ಅವರನ್ನು ಹಂಗಿಸಿ, ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದ ಅವರು, ಈಗ ಸೋಲಿನ ರುಚಿ ಕಂಡಿದ್ದಾರೆ.
ಮಾಜಿ ಶಾಸಕ ಸುರೇಶ್ ಬಾಬು ಈ ಬಾರಿ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸಿದ್ದು, ಜನರಿಗೆ ತಾವು ಕಳೆದ ಬಾರಿ ಶಾಸಕನಾಗಿದ್ದಾಗ ಮಾಡಿದ್ದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದರು. ಇನ್ನು ಮಾಧುಸ್ವಾಮಿ ವಿರುದ್ಧ ಬಂಜಾರ ಸಮುದಾಯದ ಆಕ್ರೋಶ ಕೂಡ ಸುರೇಶ್ ಬಾಬು ಗೆಲುವಿಗೆ ಕಾರಣವಾಗಿ ಎನ್ನಲಾಗುತ್ತಿದೆ. ಒಳ ಮೀಸಲಾತಿ ವಿಚಾರ ಮಾಧುಸ್ವಾಮಿಗೆ ದೊಡ್ಡ ಪೆಟ್ಟು ನೀಡಿದೆ.

ಇನ್ನು, ಬಿಜೆಪಿಯಲ್ಲಿದ್ದ ಕಿರಣ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಈ ಬಾರಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ತ್ರಿಕೋನ ಪೈಪೋಟಿಗೆ ಸಾಕ್ಷಿಯಾಗಿತ್ತು. ಇದರ ಜೊತೆಗೆ ಹಾಲಿ ಸಚಿವ ಜೆಸಿ ಮಾಧುಸ್ವಾಮಿಗೆ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ವಿರೋಧ ಕೂಡ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಮತ ಎಣಿಕೆಯಲ್ಲಿ ಮಾಧುಸ್ವಾಮಿ ಆರಂಭದಿಂದಲೂ ಮೂರನೇ ಸ್ಥಾನಕ್ಕೆ ಕುಸಿದಿದ್ದರು.
ಬಳಿಕ ಜೆಸಿ ಮಾಧುಸ್ವಾಮಿ ಮತ್ತು ಸುರೇಶ್ ಬಾಬು ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕೊನೆ ಕ್ಷಣದಲ್ಲಿ ಸಿಬಿ ಸುರೇಶ್ ಬಾಬು ಭರ್ಜರಿ ಜಯ ಗಳಿಸಿದ್ದಾರೆ. ಏಳು ಸಾವಿರ ಮತಗಳ ಅಂತರದಿಂದ ಸುರೇಶ್ ಬಾಬು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಯಾವುದೇ ನೆಲೆ ಇಲ್ಲದಿದ್ದರೂ ಕೂಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಕಿರಣ್ ಕುಮಾರ್ ಕೂಡ ಈ ಬಾರಿ ಭರ್ಜರಿ ಪೈಪೋಟಿ ನೀಡಿರುವುದು ವಿಶೇಷ.
ಬಿಜೆಪಿಯಲ್ಲಿದ್ದ ಕಿರಣ್ ಕುಮಾರ್ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಇದು ಬಿಜೆಪಯ ಮತಗಳನ್ನು ವಿಭಜಿಸುವಲಲ್ಉ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಕಿರಣ್ ಕುಮಾರ್ ಕೂಡ ಉತ್ತಮ ಮತಗಳನ್ನು ಪಡೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭದ್ರ ಅಡಿಪಾಯವನ್ನು ಹಾಕುತ್ತಿದ್ದಾರೆ ಎಂಬ ಭರವಸೆ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ.
ಸಚಿವ ಮಾಧುಸ್ವಾಮಿ ಸೋಲಿಗೆ ಬಂಜಾರ ಸಮುದಾಯದ ಕಿಚ್ಚು ಕಾರಣ ಎನ್ನಲಾಗುತ್ತಿದೆ. ಒಳ ಮೀಸಲಾತಿ ನೀಡಿದ್ದ ಬಿಜೆಪಿ ಸರ್ಕಾರ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಮುದಾಯ ಕ್ಷೇತ್ರದಲ್ಲಿ ಭಾರಿ ಪ್ರತಿಭಟನೆ ನಡೆಸಿತ್ತು. ತಾಂಡಾಗಳಲ್ಲಿ ಮಾಧುಸ್ವಾಮಿ ಅವರನ್ನು ಪ್ರಚಾರಕ್ಕೂ ಬಿಟ್ಟುಕೊಂಡಿರಲಿಲ್ಲ. ಇದೇ ಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆ ಮೇಲೂ ಬಂಜಾರ ಸಮುದಾಯದವರು ದಾಳಿ ನಡೆಸಿದ್ದರು.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜೆ. ಮಾಧುಸ್ವಾಮಿ ಜೆಡಿಎಸ್‌ನ ಸುರೇಶ್ ಬಾಬು ವಿರುದ್ಧ 10,277 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮಾಧುಸ್ವಾಮಿ 69,612 ಮತಗಳನ್ನು ಪಡೆದಿದ್ದರೆ, ಸುರೇಶ್ ಬಾಬು 59,335 ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಮತ್ತೆ ಇಬ್ಬರ ನಡುವೆ ಭರ್ಜರಿ ಪೈಪೋಟಿ ನಡೆದಿದ್ದು, ಸುರೇಶ್ ಬಾಬು ಭಾರಿ ಗೆಲುವು ಸಾಧಿಸಿದ್ದಾರೆ.












Click it and Unblock the Notifications