ಸಿಂಪಲ್ಲಾಗಿ ಬಾಲದಲ್ಲೇ ಚಿರತೆ ಸೆರೆ ಹಿಡಿದ ಎಂಟೆದೆ ಭಂಟ, ಎಲ್ಲಿ?
ಇತ್ತೀಚೆಗೆ ವ್ಯಾಘ್ರ ಚಿರತೆಗಳು ಜನವಸತಿ ಪ್ರದೇಶಗಳಿಗೆ ಎಂಟ್ರಿ ನೀಡಿ ಗಾಬರಿ ಹುಟ್ಟಿಸುತ್ತಿವೆ. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಡ ಹರಸಾಹಸವನ್ನೇ ಪಡುತ್ತಾರೆ. ಇನ್ನು ಚಿರತೆ ಸೆರೆಗಾಗಿ ಬೋನುಗಳನ್ನಿಟ್ಟು ತಿಂಗಳಗಟ್ಟಲೆ ಕಾಯುತ್ತಾರೆ. ಅಷ್ಟರಮಟ್ಟಿಗೆ ಚಿರತೆ ಜನರ ಮೇಲೆ ಎರಗುತ್ತದೆ ಎನ್ನುವ ಭಯ ಇದೆ. ಆದರೆ, ಯುವಕನೊಬ್ಬ ತೋರಿರುವ ಶೌರ್ಯಕ್ಕೆ ಅರಣ್ಯಾಧಿಕಾರಿಗಳೇ ದಂಗಾಗಿದ್ದಾರೆ.
ಬೋನಿಲ್ಲ, ಬಲೆಯಿಲ್ಲ, ಜಸ್ಟ್ ತನ್ನ ಕೈಯಲ್ಲೇ ಯುವಕನೊಬ್ಬ ಸಿಂಗಲ್ಲಾಗಿ ಚಿರತೆಯನ್ನು ಸೆರೆ ಹಿಡಿದಿದ್ದಾನೆ. ಈತನ ಬಂಡ ಧೈರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಈ ಅಚ್ಚರಿ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಎಂದು ತಿಳಿದುಬಂದಿದೆ.

ಚಿರತೆಯ ಬಾಲ ಹಿಡಿದೇ ಸುಲಭವಾಗಿ ಚಿರತೆಯನ್ನು ಸೆರೆ ಹಿಡಿಯುವ ಮೂಲಕ ತನ್ನ ಶೌರ್ಯ ಪ್ರದರ್ಶಿಸಿದ್ದಾನೆ. ರಂಗಾಪುರ ಗ್ರಾಮದ ಬಳಿ ಚಿರತೆಯೊಂದು ಕಾಣಿಸಿಕೊಂಡು ಎಲ್ಲರಿಗೂ ಭೀತಿ ಮೂಡಿಸಿತ್ತು. ಆಗಾಗ ಚಿರತೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಬಹಳ ಹೆದರಿಕೊಂಡಿದ್ದರು. ಇಲ್ಲೇ ಮತ್ತೊಂದು ಗ್ರಾಮದ ಬಳಿಯೂ ಚಿರತೆ ದರ್ಶನ ನೀಡಿತ್ತು. ಈ ಆತಂಕದಿಂದ ಗ್ರಾಮಸ್ಥರೆಲ್ಲರೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಎಂದಿನಂತೆ ಅರಣ್ಯಾಧಿಕಾರಿಗಳು ತಮ್ಮ ಎಲ್ಲ ಪರಿಕರಗಳೊಂದಿಗೆ ಗ್ರಾಮಕ್ಕೆ ಚಿರತೆ ಹಿಡಿಯಲು ಬಂದಿದ್ದರು. ಆದರೂ ಚಿರತೆಯನ್ನು ಸೆರೆ ಹಿಡಿಯುವುದು ಸಾಧ್ಯವಾಗಿರಲಿಲ್ಲ. ಚಿರತೆಗಾಗಿ ಬಲೆ ಬೀಸಿದ್ದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಚಿರತೆಯ ಅಟ್ಟಹಾಸ ಮಣಿಸುವುದು ಹೇಗಪ್ಪಾ ಎಂದು ತಲೆಕೆಡಿಸಿಕೊಂಡಿದ್ದರು.

ಚಿರತೆ ಸಿಗದ್ದಕ್ಕೆ ಗ್ರಾಮಸ್ಥರೆಲ್ಲರೂ ಜೀವ ಹಿಡಿದು ಕುಳಿತಿದಿದ್ದರು. ಕೊನೆಗೆ ಇದರಿಂದ ರೋಸಿ ಹೋಗಿದ್ದ ಇದೇ ಗ್ರಾಮದ ಆನಂದ್ ಎಂಬುವರು ಚಿರತೆಯನ್ನು ಹಿಡಿಯಲು ಫೀಲ್ಡಿಗಿಳಿದಿದ್ದ. ಚಿರತೆ ಬಂದ ಕೂಡಲೇ ನೇರವಾಗಿ ಅಖಾಡಕ್ಕಿಳಿದು ಜಸ್ಟ್ ಚಿರತೆಯ ಬಾಲ ಹಿಡಿದು ಬೋನಿಗೆ ಹಾಕೇಬಿಟ್ಟಿದ್ದಾನೆ. ನೋಡನೋಡುತ್ತಿದ್ದಂತೆ ಬಾಲದಿಂದಲೇ ಚಿರತೆ ಸೆರೆ ಹಿಡಿದ ಯುವಕನ ಧೈರ್ಯಕ್ಕೆ ಖುದ್ದು ಅರಣ್ಯಾಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಈತನ ಶೌರ್ಯಕ್ಕೆ ಮೆಚ್ಚಿ ಎಲ್ಲರೂ ಶಹಬ್ಬಾಸ್‌ಗಿರಿಯೂ ಕೊಟ್ಟಿದ್ದಾರೆ.
ಚಿರತೆ ಸೆರೆಯಾಗಿದ್ದರಿಂದ ಅಕ್ಕಪಕ್ಕದ ಗ್ರಾಮಸ್ಥರೆಲ್ಲರೂ ನಿಟ್ಟುಸಿರು ಬಿಟ್ಟಿದ್ದು, ಧೈರ್ಯಶಾಲಿ ಆನಂದ್ ಅವರನ್ನು ತಲೆಮೇಲೆ ಹೊತ್ತು ಮೆರೆಸಿದ್ದಾರೆ. ಊರಿಗೊಬ್ಬ ಆನಂದ ಇದ್ದರೆ ಸಾಕು, ಚಿರತೆ ಬಂದರೂ ಭಯವಿಲ್ಲ ಎಂದು ಗ್ರಾಮಸ್ಥರೆಲ್ಲ ಕೊಂಡಾಡಿದ್ದಾರೆ. ಎಲ್ಲ ಸಲಕರಣೆಗಳಿದ್ದರೂ ಅರಣ್ಯಾಧಿಕಾರಿಗಳಿಂದ ಚಿರತೆ ಸೆರೆ ಹಿಡಿಯಲು ಸಾಧ್ಯವಾಗಲಿಲ್ಲವಲ್ಲಾ? ಎಂದು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲೂ ಚಿರತೆ ಪ್ರತ್ಯಕ್ಷವಾಗಿತ್ತು. ನಗರದ ಸಪ್ತಗಿರಿ ಬಡಾವಣೆಯಲ್ಲಿ ಚಿರತೆ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ತುಮಕೂರಿನಲ್ಲಿ ಚಿರತೆ ಸೆರೆ ಹಿಡಿಯುವ ಸಲುವಾಗಿ ಸುಮಾರು 50ಕ್ಕೂ ಹೆಚ್ಚು ಬೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಚಿರತೆ ಪ್ರತ್ಯಕ್ಷವಾಗುವ ಸ್ಥಳಕ್ಕೆ ಬೋನ್ ಸಾಗಿಸುವುದು ದೊಡ್ಡ ಸವಾಲಾಗಿದೆ. ಕೆಲವು ಕಡೆ ಬೋನ್ ಇಡಲು ಕೂಡ ಸಾಧ್ಯವಾಗುವುದಿಲ್ಲ ಎಂದು ಜನರು ದೂರಿದ್ದಾರೆ.












Click it and Unblock the Notifications