ತುಮಕೂರು: ಡಿಕೆಶಿ ಬ್ರದರ್ಸ್ ವಿರುದ್ದ ಕಾಂಗ್ರೆಸ್ ಮುಖಂಡನ ಮೂಲಕವೇ ಬಿಜೆಪಿ ಭರ್ಜರಿ ರಣತಂತ್ರ?
ಮೇ 2023ರೊಳಗೆ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಹಲವು ರಣತಂತ್ರಗಳನ್ನು ಪ್ರಯೋಗಿಸುತ್ತಿದೆ. ಆದರೆ, ಜೆಡಿಎಸ್ ಯಾಕೋ ಮಂಕಾದಂತೆ ಕಾಣುತ್ತಿದ್ದು, ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆಗೆ ಪರ್ಯಾಯವಾಗಿ ಜನತಾ ಜಲಧಾರೆಯ ಗಂಗಾ ರಥಯಾತ್ರೆಯನ್ನು ಹಮ್ಮಿಕೊಂಡಿತ್ತು. ಆದರೆ, ಕೋವಿಡ್ ಕಾರಣಕ್ಕಾಗಿ ಅದನ್ನು ಮುಂದೂಡಿದೆ.
ರಾಜ್ಯ ರಾಜಕಾರಣದಲ್ಲಿ ಪ್ರಮುಖ ಭಾಷ್ಯ ಬರೆಯಬಲ್ಲ ಜಿಲ್ಲೆಯಲ್ಲಿ ಒಂದು ತುಮಕೂರು ಕೂಡಾ. ಹನ್ನೊಂದು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮೂರೂ ಪ್ರಕ್ಷಗಳು ತಮ್ಮತಮ್ಮ ಪ್ರಾಭಲ್ಯವನ್ನು ಮೆರೆದಿತ್ತು.
ಬಿಜೆಪಿ ಮತ್ತು ಜೆಡಿಎಸ್ ನಾಲ್ಕು, ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲುವು ಕಂಡಿದ್ದವು. ಅದರಲ್ಲಿ ಶಿರಾದ ಜೆಡಿಎಸ್ ಅಭ್ಯರ್ಥಿ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದಿದ್ದರೆ, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ ಬಹುತೇಕ ಕಾಂಗ್ರೆಸ್ ಪಾಲಾಗಿದ್ದಾರೆ. ಹಾಗಾಗಿ, ಇಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ರಾಜಕೀಯ ಏರ್ಪಟ್ಟಿದೆ.
ಜಿಲ್ಲೆಯ ರಾಜಕಾರಣದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ/ಸಂಸದ ಡಿ.ಕೆ. ಸುರೇಶ್ ಅವರ ಹಿಡಿತ ಜಾಸ್ತಿಯಿದೆ. ಈಗ, ಅವರನ್ನು ಹಣೆಯಲು ಜಿಲ್ಲೆಯ ಹಿರಿಯ ರಾಜಕಾರಣಿಯೊಬ್ಬರನ್ನು ಬಳಸಿಕೊಂಡು, ಮುಂದಿನ ಚುನಾವಣೆಯ ಹೊತ್ತಿಗೆ ವೇದಿಕೆ ಸಿದ್ದಪಡಿಸಿಕೊಳ್ಳುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಧರ್ಮಸ್ಥಳ ಮಂಜುನಾಥಸ್ವಾಮಿಯ ಮುಂದೆ ಎಲ್ಲಾ ಹೇಳಿಕೊಂಡು ಆರೋಪ ಮುಕ್ತ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೀಟ್ ಶೇರಿಂಗ್ ವಿಚಾರದಲ್ಲಿ ಮಾಜಿ ಸಂಸದ, ಸಜ್ಜನ ರಾಜಕಾರಣಕ್ಕೆ ಹೆಸರಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಅಲ್ಲಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ್ರು ಸ್ಪರ್ಧಿಸಿ ಸೋತಿದ್ದರು. ಇದಾದ ನಂತರ ಅವರ ವಿರುದ್ದ ಹಲವು ಅಪಪ್ರಚಾರಗಳು ನಡೆದಿದ್ದವು. ನೊಂದ ಮುದ್ದಹನುಮೇಗೌಡ, ಧರ್ಮಸ್ಥಳ ಮಂಜುನಾಥಸ್ವಾಮಿಯ ಮುಂದೆ ಎಲ್ಲಾ ಹೇಳಿಕೊಂಡು ಆರೋಪ ಮುಕ್ತರಾಗಿದ್ದರು. ಈಗ, ಮುದ್ದಹನುಮೇಗೌಡ್ರು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಸೋಮವಾರದಿಂದ (ಜ 24) ಅಧಿಕೃತವಾಗಿಯೇ ಆಖಾಡಕ್ಕೆ ಧುಮುಕಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಹೆಸರಿನಲ್ಲಿ ನನಗೆ ಟಿಕೆಟ್ ತಪ್ಪಿಸಲಾಗಿತ್ತು
"ನನ್ನನ್ನು ಅಷ್ಟು ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಹೆಸರಿನಲ್ಲಿ ನನಗೆ ಟಿಕೆಟ್ ತಪ್ಪಿಸಲಾಗಿತ್ತು. ನನಗೂ ರಾಜಕೀಯದಲ್ಲಿ ಆಕಾಂಕ್ಷಿಗಳಿವೆ, ಹಾಗಾಗಿ, ಮುಂದಿನ ಅಸೆಂಬ್ಲಿ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಿ, ಹಿಂದೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿ"ಎಂದು ಮುದ್ದಹನುಮೇಗೌಡ, ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಮಿಶ್ರಿತ ಮನವಿಯನ್ನು ಮಾಡಿದ್ದಾರೆ.

ಹಾಲೀ ಶಾಸಕ ಡಾ. ಎಚ್.ಡಿ.ರಂಗನಾಥ್, ಡಿಕೆಶಿ ಅತ್ಯಂತ ಹತ್ತಿರದ ಸಂಬಂಧಿ
ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಬಯಸುತ್ತಿರುವುದು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರಿಗೆ ಈಗಿಂದಲೇ ತಲೆನೋವು ಆರಂಭವಾದಂತಿದೆ. ಯಾಕೆಂದರೆ, ಅಲ್ಲಿನ ಹಾಲೀ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರು ಡಿಕೆ ಸಹೋದರರ ಅತ್ಯಂತ ಹತ್ತಿರದ ಸಂಬಂಧಿ. ವೃತ್ತಿಯಲ್ಲಿ ವೈದ್ಯರೂ ಆಗಿರುವ ರಂಗನಾಥ್ ಅವರು ಡಿಕೆಶಿ ಸಹೋದರರ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದಾರೆ. ಹಾಗಾಗಿ, ಅವರನ್ನು ಬಿಟ್ಟು ಮುದ್ದಹನುಮೇಗೌಡ್ರಿಗೆ ಟಿಕೆಟ್ ನೀಡುವುದು ಇವರಿಗೆ ಕಷ್ಟವಾಗಬಹುದು ಎನ್ನುವುದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ರಾಜಕೀಯ ಲೆಕ್ಕಾಚಾರ.

ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಚಿಂತನೆಯನ್ನು ಬಿಜೆಪಿ ಮಾಡುತ್ತಿದೆ
ಒಂದು ವೇಳೆ, ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಎಸ್.ಪಿ.ಮುದ್ದಹನುಮೇಗೌಡ್ರು ಸ್ಪರ್ಧಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಮುಂದಾಗಿದ್ದು, ಅವರನ್ನು ಪಕ್ಷಕ್ಕೆ ಸೆಳೆದು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಚಿಂತನೆಯನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಡಿಕೆಶಿಯವರ ವೇಗವನ್ನು ತಡೆಯಲು ಬಿಜೆಪಿ ಈ ಕಾರ್ಯತಂತ್ರಕ್ಕೆ ಮೊರೆಹೋಗುವ ಸಾಧ್ಯತೆಯಿದೆ. ಒಂದು ವೇಳೆ ಈ ಲೆಕ್ಕಾಚಾರವೆಲ್ಲಾ ನಡೆಯದಿದ್ದರೂ, ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಗೌಡ್ರು ಹೊಂದಿದ್ದಾರೆ ಎನ್ನುವ ಮಾತಿದೆ.












Click it and Unblock the Notifications