ತುಮಕೂರು: ಅಳಿಯ ಸ್ನೇಹಿತರಿಂದಲೇ 70 ವರ್ಷದ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ
ತುಮಕೂರು, ಮೇ. 29: ತುಮಕೂರು ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 70 ವರ್ಷದ ದಲಿತ ವೃದ್ಧೆ ಮೇಲೆ ಆಕೆಯ ಅಳಿಯನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಹೀನ ಕೃತ್ಯ ನಡೆದಿದೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
70 ವರ್ಷದ ವೃದ್ಧೆ ನೀಡಿದ ದೂರಿನ ಪ್ರಕಾರ, ಮೇ 21 ರಂದು ತನ್ನ ಮಗಳು ಮತ್ತು ಅಳಿಯ ರಘು ಅವರೊಂದಿಗೆ ತನ್ನ ನಿವಾಸದಲ್ಲಿದ್ದಾಗ ಘಟನೆ ಸಂಭವಿಸಿದೆ. ತನ್ನ ಮಗಳು ಸಂಬಂಧಿಕರ ಮನೆಗೆ ಹೋಗಿದ್ದಳು ಮತ್ತು ಅಳಿಯ ರಘು ತನ್ನ ಇಬ್ಬರು ಸ್ನೇಹಿತರಾದ ರಾಜೇಶ್ ಮತ್ತು ಮಂಜುನಾಥ್ ಅವರೊಂದಿಗೆ ರಾತ್ರಿ 10 ಗಂಟೆಗೆ ಕುಡಿದ ಅಮಲಿನಲ್ಲಿ ಮನೆಗೆ ಬಂದರು ಎಂದು ಅವರು ಆರೋಪಿಸಿದ್ದಾರೆ.

ತನ್ನ ಅಳಿಯ ರಘು ನಿದ್ರೆಗೆ ಜಾರಿದಾಗ ಆತನ ಇಬ್ಬರು ಸ್ನೇಹಿತರು ವೃದ್ಧೆಗೆ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮರುದಿನ, ಪ್ರಜ್ಞಾಹೀನರಾಗಿದ್ದ ಅವರನ್ನು ನೋಡಿ ಅತ್ತೆ ಮಲಗಿದ್ದಾಳೆಂದು ಭಾವಿಸಿ ಅಳಿಯ ಕೆಲಸಕ್ಕೆ ಹೋಗಿದ್ದಾರೆ. ಹಲವು ಗಂಟೆಗಳ ನಂತರ ಆಕೆ ಎಚ್ಚರಗೊಳ್ಳದಿದ್ದಾಗ ನೆರೆಹೊರೆಯವರು ಬಂದು ನೋಡಿದಾಗ ವೃದ್ಧೆಯ ಮೇಲೆ ದೈಹಿಕವಾಗಿ ಹಲ್ಲೆಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೇ 26 ರಂದು ಇಬ್ಬರ ಮೇಲೆ ದೂರು ದಾಖಲಾಗಿದ್ದು, ಪೊಲೀಸರು ಐಪಿಸಿ 376 (ಅತ್ಯಾಚಾರ), 506 (ಜೀವ ಬೆದರಿಕೆ) ಮತ್ತು ದೌರ್ಜನ್ಯ ತಡೆ ಕಾಯ್ದೆ 2015 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾರೆ.

ವೃದ್ಧೆಯ ದೂರಿನ ಆಧಾರದ ಮೇಲೆ ನಾವು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಕುಣಿಗಲ್ ಪೊಲೀಸ್ ನಿರೀಕ್ಷಕ ಗುರು ಪ್ರಸಾದ್ ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ವೃದ್ಧೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications