ತುಮಕೂರು ನಗರದಲ್ಲಿ ಸ್ಥಾಪನೆಯಾಗಲಿದೆ 4 ಇಂದಿರಾ ಕ್ಯಾಂಟೀನ್
ತುಮಕೂರು, ಅಕ್ಟೋಬರ್ 25 : ಕರ್ನಾಟಕ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ತುಮಕೂರು ನಗರದಲ್ಲಿ 4 ಕಡೆ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಳ್ಳಲಿದೆ.
ತುಮಕೂರು ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ನಗರದಲ್ಲಿ ಎಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡಬಹುದು? ಎಂದು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಗುರುತಿಸಿರುವ ಸ್ಥಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಕ್ಯಾಂಟೀನ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಯಶಸ್ವಿಯಾಗಿದೆ. 5 ರೂ.ಗೆ ಬೆಳಗಿನ ಉಪಹಾರ, 10 ರೂ.ಗೆ ಊಟ ನೀಡಲಾಗುತ್ತಿದೆ. ತುಮಕೂರು ನಗರದಲ್ಲಿನ 4 ಕ್ಯಾಂಟೀನ್‌ಗಳಲ್ಲಿ ಕನಿಷ್ಠ 1000 ಜನರಿಗೆ ಊಟ, ಉಪಹಾರ ಪೂರೈಸಿದರೆ ಅನುಕೂಲವಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಜನಸಂದಣಿ ಇರುವ ಪ್ರದೇಶ, ನಿವೇಶನ, ಕಟ್ಟಡ ಲಭ್ಯವಿರುವ ಪ್ರದೇಶ ಹೀಗೆ ವಿವಿಧ ವಿಷಯಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ 4 ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಸರ್ಕಾರ ಇದಕ್ಕೆ ಒಪ್ಪಿದರೆ ಮುಂದಿನ ಕೆಲಸಗಳು ಆರಂಭವಾಗಲಿವೆ.
ಕರ್ನಾಟಕ ಸರ್ಕಾರ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಒಪ್ಪಿಗೆ ನೀಡಿದೆ. 2018ರ ಜನವರಿ 1ರಂದು 246 ಕ್ಯಾಂಟೀನ್‌ಗಳು ರಾಜ್ಯಾದ್ಯಂತ ಬಾಗಿಲು ತೆರೆಯಲಿವೆ. ನವೆಂಬರ್ 17ರೊಳಗೆ ಸ್ಥಳಗಳನ್ನು ಗುರುತಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ.












Click it and Unblock the Notifications