Thumakuru: 50 ವಯಸ್ಸಿನ ವ್ಯಕ್ತಿ ಜೊತೆ ಕಾಲೇಜು ವಿದ್ಯಾರ್ಥಿನಿ ಲವ್ ಸಾವಿನಲ್ಲಿ ಅಂತ್ಯ
ತುಮಕೂರು, ಜೂನ್ 23: 50 ವರ್ಷದ ವಿವಾಹಿತ ಪುರುಷ ಹಾಗೂ ಕಾಲೇಜು ವಿದ್ಯಾರ್ಥಿನಿಯ ಪ್ರೀತಿ ಸಾವಿನಲ್ಲಿ ಅಂತ್ಯವಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾವತ್ತೂರಿನಲ್ಲಿ ನಡೆದಿದೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ವಿದ್ಯಾರ್ಥಿನಿ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ವಿವಾಹಿತ ಪುರುಷ ರಂಗಶಾಮಣ್ಣ (50) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಕಾಲೇಜು ವಿದ್ಯಾರ್ಥಿನಿ ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರು ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಬೇಕೆಂದು ಕೊಂಡ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ತಮ್ಮ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇವರ ನಡುವಿನ ವಯಸ್ಸಿನ ಅಂತರ ನೋಡಿ ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಿ ಬುದ್ಧಿ ಹೇಳಿದ್ದರು. ಅಲ್ಲದೇ ರಂಗಶಾಮಣ್ಣ ವಿವಾಹಿತನಾಗಿದ್ದು, ಈ ಮದುವೆ ಸಾಧ್ಯವಿಲ್ಲ ಎಂದು ಮನೆಯಲ್ಲಿ ನಿರಾಕರಿಸಿದ್ದರು.
ಇದರಿಂದ ಮನನೊಂದ ಈ ಜೋಡಿ ಕಳೆದ 4 ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಅನನ್ಯ ಹಾಗೂ ರಂಗಶಾಮಣ್ಣ ಇಬ್ಬರು ಕಣ್ಮರೆಯಾಗುತ್ತಿದ್ದಂತೆ ಪೋಷಕರು ಹುಡುಕಾಟ ನಡೆಸಿದ್ದಾರೆ. ನಿನ್ನೆ ಮಾವತ್ತೂರು ಕೆರೆಯ ದಡ ಮೇಲೆ ಇಬ್ಬರ ಚಪ್ಪಲಿ ಹಾಗೂ ಮೊಬೈಲ್ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಶಂಕಿಸಿ ಹುಡುಕಾಟ ಆರಂಭಿಸಲಾಗಿತ್ತು.
ಇಂದು ಭಾನುವಾರ ಬೆಳಗ್ಗೆ ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ. ಅನನ್ಯ ಹಾಗೂ ರಂಗಶಾಮಣ್ಣ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಗೆ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.












Click it and Unblock the Notifications