• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ವ್ಯಾಪಕ ಮಳೆ: 5 ಜಿಲ್ಲೆಗಳಿಗೆ ಮತ್ತೆ ಆರೆಂಜ್ ಅಲರ್ಟ್

|
Google Oneindia Kannada News

ತಿರುವನಂತಪುರಂ ಅಕ್ಟೋಬರ್ 29: ಕೇರಳದಲ್ಲಿ ಮತ್ತೆ ವರುಣನ ಅರ್ಭಟ ಶುರುವಾಗಿದೆ. ಈಗಾಗಲೇ ಅಧಿಕ ಮಳೆಗೆ ಕಂಗಾಲಾಗಿದ್ದ ಕೇರಳಿಗರು ಮತ್ತೆ ಮಳೆಯ ಮುನಿಸಿಗೆ ಸಿಲುಕುವಂತೆ ಕಾಣಿಸುತ್ತಿದೆ. ಕೇರಳದ ದಕ್ಷಿಣ ಜಿಲ್ಲೆಗಳ ಹಲವು ಭಾಗಗಳಲ್ಲಿ ಶುಕ್ರವಾರ ವ್ಯಾಪಕ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದೆ. ಐದು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ಜೊತೆಗೆ ಹೆಚ್ಚು ಮಳೆ ಸೂಚನೆ ಇರುವ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ (IMD) ಇತ್ತೀಚಿನ ನವೀಕರಣದ ಪ್ರಕಾರ, ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅಧಿಕ ಗಾಳಿ, ಗುಡುಗು ಸಮೇತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ತ್ರಿಶೂರ್, ಪಾಲಕ್ಕಾಡ್, ಕೋಯಿಕ್ಕೋಡ್, ಮಲಪ್ಪುರಂ ಮತ್ತು ವಯನಾಡ್ ಎಂಬ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯನ್ನು ಸೂಚಿಸುವ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಜೊತೆಗೆ ಕೊಲ್ಲಂ ಜಿಲ್ಲೆಯ ಪುನಲೂರ್-ತೆನ್ಮಲ ಪ್ರದೇಶದಲ್ಲಿ ತಡರಾತ್ರಿ ಭಾರೀ ಮಳೆಯಾಘಿದ್ದು ಜನ ಜೀವನ ಅಸ್ಥವ್ಯಸ್ಥವಾಗಿದೆ. ಪ್ರವಾಹದಂತೆ ಮಳೆ ನೀರು ಹಲವಾರು ಮನೆಗಳಿಗೆ ನುಗ್ಗಿದ್ದು ಮೂರು ವಾಹನಗಳು ಕೊಚ್ಚಿಹೋಗಿವೆ. ನಿರಂತರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಅಪಾರ ಆಸ್ತಿ-ಪಾಸ್ತಿ ಹಾನಿ ಉಂಟಾಗಿದೆ. ಬೃಹತ್ ಬಂಡೆಗಳು ರಸ್ತೆಗೆ ಉರುಳಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯ ಜನರು ತಿಳಿಸಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಮತ್ತೊಂದು ವಾಯುಭಾರ ಕುಸಿತದ ಬಗ್ಗೆ ವರದಿಗಳು ಕೇಳಿಬಂದಿವೆ. ವಾಯುಭಾರ ಕುಸಿತವು ಬಲಗೊಂಡರೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಕಳೆದ ವಾರ ನಿರಂತರ ಮಳೆಯಿಂದಾಗಿ ಕೇರಳ ಭೂಕುಸಿತ ಮತ್ತು ಪ್ರವಾಹದಿಂದ ಜರ್ಜರಿತವಾಗಿದೆ. ಕೊಟ್ಟಾಯಂನ ಕೂಟ್ಟಿಕಲ್ ಮತ್ತು ಇಡುಕ್ಕಿಯ ಕೊಕ್ಕಯಾರ್‌ನಲ್ಲಿ ಎರಡು ಪ್ರಮುಖ ಭೂಕುಸಿತಗಳು ಸೇರಿದಂತೆ ರಾಜ್ಯಾದ್ಯಂತ ವಿವಿಧ ಮಳೆ ಸಂಬಂಧಿತ ಘಟನೆಗಳಿಗೆ ನಲವತ್ತೆರಡು ಜೀವಗಳು ಬಲಿಯಾಗಿವೆ. ಕೆಎಸ್‌ಡಿಎಂಎ ಪ್ರಕಾರ, ಕನಿಷ್ಠ 90 ಮನೆಗಳು ನಾಶವಾಗಿವೆ ಮತ್ತು 700 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕಳೆದ ಕೆಲವು ದಿನಗಳಿಂದ ಹೆಚ್ಚಿನ ಮಳೆಯಾಗದಿದ್ದರೂ ಕೆಎಸ್‌ಇಬಿಯ ಐದು ಅಣೆಕಟ್ಟುಗಳು ಮತ್ತು ನೀರಾವರಿ ಇಲಾಖೆಯ 16 ಅಣೆಕಟ್ಟುಗಳು ಸೇರಿದಂತೆ ರಾಜ್ಯದ 21 ಅಣೆಕಟ್ಟುಗಳ ಷಟರ್‌ಗಳನ್ನು ತೆರೆಯಲಾಗಿದೆ. ಆದರೆ ಈ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಕಡಿಮೆ ಇರುವ ಕಾರಣ ಪ್ರಸ್ತುತ ಕಡಿಮೆ ನೀರು ಮಾತ್ರ ಬಿಡಲಾಗುತ್ತಿದೆ.

ಈ ಎಲ್ಲಾ ಅಣೆಕಟ್ಟುಗಳು ಈಗ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯದ 91-100 ಪ್ರತಿಶತವನ್ನು ಹೊಂದಿವೆ. ಅಣೈರಂಗಲ್‌ನಲ್ಲಿ ಬ್ಲೂ ಅಲರ್ಟ್ ಜಾರಿಯಲ್ಲಿದ್ದರೆ, ಇಡುಕ್ಕಿ, ಮಟ್ಟುಪೆಟ್ಟಿ, ಪೆರಿಂಗಲ್ಕುತ್ತು ಮತ್ತು ಅನಾಥೋಡು (ಶಬರಿಗಿರಿ) ಯೋಜನೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಎರಡು ಸ್ಥಳಗಳಲ್ಲಿ, ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಒಂದರಲ್ಲಿ ಗಂಟೆಗೆ 40 ಕಿಮೀ ವೇಗದಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ. ಆದಾಗ್ಯೂ, ರಾಜ್ಯ ಸರ್ಕಾರವು ಇನ್ನೂ ಟ್ರಾಲಿಂಗ್ ಚಟುವಟಿಕೆಗಳ ಮೇಲೆ ನಿಷೇಧವನ್ನು ಘೋಷಿಸಿಲ್ಲ.

ಕೇರಳದಲ್ಲಿ ಇತ್ತೀಚಿಗೆ ವರುಣನ ಅರ್ಭಟಕ್ಕೆ ಸಿಲುಕಿದ ಜನ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಾಗಲೇ ಮತ್ತೊಮ್ಮೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕೊರೊನಾ ಸಂಕಷ್ಟದಲ್ಲಿರುವ ಜನ ಚೇತರಿಸಿಕೊಳ್ಳಬೇಕು ಅನ್ನೋ ಹೊತ್ತಿಗೆ ಅಧಿಕ ಮಳೆಗೆ ಸಿಲುಕಿ ಕಂಗಾಲಾಗಿದ್ದಾರೆ.

English summary
Several parts of the southern districts of Kerala continued to receive widespread rainfall on Friday causing waterlogging in low-lying areas and damage to roads as the weathermen sounded an 'Orange Alert'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X