ದಕ್ಷಿಣದಲ್ಲೂ ಹೊತ್ತಿಕೊಂಡಿತಾ ಪೌರತ್ವ ತಿದ್ದುಪಡಿಯ 'ಪಂಜು'?
ತಿರುವನಂತಪುರಂ, ಡಿಸೆಂಬರ್.12: ದೇಶಾದ್ಯಂತ ಪೌರತ್ವ ತಿದ್ದುಪಡಿ ಮಸೂದೆಯದ್ದೇ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ನೀತಿಗೆ ಈಶಾನ್ಯ ರಾಜ್ಯಗಳಷ್ಟೇ ಅಲ್ಲ ದಕ್ಷಿಣ ಭಾರತದ ರಾಜ್ಯಗಳು ಕೂಡಾ ವಿರೋಧ ವ್ಯಕ್ತಪಡಿಸುತ್ತಿವೆ. ಈಗದೇ ಪಟ್ಟಿಗೆ ಕೇರಳ ಕೂಡಾ ಸೇರ್ಪಡೆಯಾಗಿದೆ.
ಪಾಕಿಸ್ತಾನ್, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ್ ದಿಂದ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಭಾರತೀಯ ಪೌರತ್ವ ನೀಡಲು ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ದಕ್ಷಿಣ ಭಾರತದ ಕೇರಳ ಕೂಡಾ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದೆ.
ಕೇರಳದಲ್ಲಿ ಕ್ಯಾಬ್ ನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ಭಾರತವನ್ನು ವಿಭಾಗ ಮಾಡಲಾಗುತ್ತಿದೆ. ಇದು ದೇಶದ ಜಾತ್ಯಾತೀತ ನಿಲುವಿಗೆ ವಿರೋಧಿಯಾಗಿದೆ ಎಂದು ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಈಗ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಅಸಂವಿಧಾನಿಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ. ಧರ್ಮವನ್ನೇ ಮಾನದಂತವಾಗಿ ಇಟ್ಟುಕೊಂಡು ವಲಸಿಗರಿಗೆ ದೇಶದ ಪೌರತ್ವವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸಂವಿಧಾನದ ಸಮಾನತೆ ಹಾಗೂ ಜಾತ್ಯಾತೀತ ನಿಲುವಿಗೆ ವಿರೋಧಿಯಾಗಿದೆ ಎಂದು ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.
ಇನ್ನೊಂದೆಡೆ ಕೇಂದ್ರ ಸರ್ಕಾರದ ನೂತನ ತಿದ್ದುಪಡಿ ಮಸೂದೆ ಈಶಾನ್ಯ ರಾಜ್ಯಗಳನ್ನೇ ಹೊತ್ತಿ ಉರಿಯುವಂತೆ ಮಾಡಿದೆ. ತಿದ್ದುಪಡಿ ಮಸೂದೆ ವಾಪಸ್ ಪಡೆಯುವಂತೆ ಅಸ್ಸಾಂ, ಅರುಣಾಚಲಪ್ರದೇಶ, ಮೀಜೋರಾಂ ಸೇರಿದಂತೆ ಆರಕ್ಕೂ ಹೆಚ್ಚು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ.












Click it and Unblock the Notifications