ಕೇರಳ: ಮಾವೊವಾದಿ ನಂಟಿನ ಆರೋಪದಲ್ಲಿ ಬಂಧಿತನಾಗಿದ್ದ ಯುವಕನ ತಂದೆಗೆ ಸೋಲು
ತಿರುವನಂತಪುರಂ, ಡಿಸೆಂಬರ್ 16: ಮಾವೊವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿ ಅಲನ್‌ನ ತಂದೆ ಮುಹಮ್ಮದ್ ಶುಹೈಬ್ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.
ಕೆ. ಮೊಹಮ್ಮದ್ ಶುಹೈಬ್ ಅವರು ಕೋಯಿಕ್ಕೋಡ್ ಕಾರ್ಪೊರೇಷನ್‌ನ ವಲಿಯಾಂಗಡಿ ವಿಭಾಗದಿಂದ ಸ್ಪರ್ಧಿಸಿದ್ದರು. ಸಿಪಿಎಂನ ಮಾಜಿ ಪದಾಧಿಕಾರಿಯಾಗಿರುವ ಅವರ ಸ್ಪರ್ಧೆ ತೀವ್ರ ಟೀಕೆಗೆ ಗುರಿಯಾಗಿತ್ತು. ಸಿಪಿಎಂ ವಿರುದ್ಧ ಬಂಡಾಯವೆದ್ದಿದ್ದ ಅವರು ಪಕ್ಷದ ನಿಯಮಗಳನ್ನು ಖಂಡಿಸಿದ್ದರು.
ಅಲನ್ ಶುಹೈಬ್ ಮತ್ತು ತಹಾ ಫಜಲ್‌ರನ್ನು ಕೋಯಿಕ್ಕೋಡ್‌ನಲ್ಲಿ 2019ರ ನವೆಂಬರ್ 1ರಂದು ಬಂಧಿಸಲಾಗಿತ್ತು. ಮಾವೊವಾದಿ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದಡಿ ಅವರ ಮೇಲೆ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹತ್ತು ತಿಂಗಳ ಜೈಲು ಶಿಕ್ಷೆಯ ಬಳಿಕ ಇಬ್ಬರೂ ಸೆ. 9ರಂದು ಬಿಡುಗಡೆಯಾಗಿದ್ದರು.

ಟಿಪಿ ಚಂದ್ರಶೇಖರನ್ ಅವರು 2009ರಲ್ಲಿ ಸ್ಥಾಪಿಸಿದ ರೆವೊಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಆರ್‌ಎಂಪಿಐ) ಪ್ರತಿನಿಧಿಯಾಗಿದ್ದ ಶುಹೈಬ್, ಬಳಿಕ ಸಿಪಿಎಂ ಸೇರಿಕೊಂಡಿದ್ದರು. 2012ರಲ್ಲಿ ಚಂದ್ರಶೇಖರನ್ ಅವರನ್ನು ಸಿಪಿಎಂ ಕಾರ್ಯಕರ್ತರು ಹತ್ಯೆ ಮಾಡಿದ್ದರು.
ಈ ಬಾರಿ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶುಹೈಬ್ ತಮ್ಮ ಮಗ ಹಾಗೂ ಆತನ ಸ್ನೇಹಿತನ ಬಂಧನವನ್ನೇ ಚುನಾವಣೆಯ ಪ್ರಮುಖ ವಿಷಯವನ್ನಾಗಿಸಿಕೊಂಡಿದ್ದರು. ರಾಜ್ಯದಲ್ಲಿ ಎಡಪಂಥೀಯ ಎಂದು ಗುರುತಿಸಿಕೊಳ್ಳಬೇಕೆಂದರೆ ನೀವು ಅನೇಕ ವಿಚಾರಗಳಲ್ಲಿ ಮೌನವಹಿಸಬೇಕಾಗುತ್ತದೆ. ಕೆಲವೇ ಆಯ್ದ ವಿಚಾರಗಳ ಬಗ್ಗೆ ಮಾತ್ರ ಧ್ವನಿ ಎತ್ತಬಹುದು. ಈ ನಿಯಮವನ್ನು ಮುರಿದರೆ ನೀವು ಎಡ ವಿರೋಧಿ ಎನಿಸಿಕೊಳ್ಳುತ್ತೀರಿ. ಈ ಸಂಸ್ಕೃತಿಯು ಅನೇಕ ಬುದ್ಧಿಜೀವಿಗಳು ಮತ್ತು ಯುವಕರನ್ನು ಸುಮ್ಮನಾಗಿಸಿದೆ' ಎಂದು ಅವರು ಎಡಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆದಿದ್ದರು.
ಕೋಯಿಕ್ಕೋಡ್‌ನ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಶುಹೈಬ್, ಒಂದು ಮಲಯಾಳಂ ಸಿನಿಮಾದಲ್ಲಿಯೂ ನಟಿಸಿದ್ದಾರೆ.












Click it and Unblock the Notifications