ಕರಾವಳಿ ಭಾಗದಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು
ತಿರುವನಂತಪುರಂ, ಜುಲೈ 17 : ಪುಲುವಿಲ್ಲಾ ಸೇರಿದಂತೆ ತಿರುವನಂತರಪುರದ ಕರಾವಳಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯಕ್ಕೆ ಹಬ್ಬಿದೆ. ಕೇರಳ ರಾಜ್ಯದಲ್ಲಿ ಶುಕ್ರವಾರ 791 ಹೊಸ ಪ್ರಕರಣಗಳು ದಾಖಲಾಗಿವೆ.
ಕೇರಳದ ರಾಜಧಾನಿ ತಿರುವನಂತಪುರದ ಕರಾವಳಿ ತೀರದ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿರುವುದು ಶುಕ್ರವಾರ ಖಚಿತವಾಗಿದೆ. 532 ಪ್ರಕರಣಗಳು ಸ್ಥಳೀಯರಿಂದಲೇ ಹಬ್ಬಿರುವುದು ತಿಳಿದುಬಂದಿದೆ.
ಶುಕ್ರವಾರ ರಾಜ್ಯದಲ್ಲಿ ದಾಖಲಾದ 791 ಪ್ರಕರಣಗಳಲ್ಲಿ 42 ಪ್ರಕರಣಗಳ ಮೂಲ ಪತ್ತೆಯೇ ಆಗಿಲ್ಲ. ಇಂದು ತ್ರಿಷುರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರ ಮೃತಪಟ್ಟಿದ್ದಾನೆ. ಒಟ್ಟು ಮೃತಪಟ್ಟವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ತಿರುವನಂತಪುರದಲ್ಲಿ ಶುಕ್ರವಾರ 246 ಹೊಸ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 237 ಪ್ರಕರಣಗಳು ಸ್ಥಳೀಯವಾಗಿಯೇ ಹಬ್ಬಿವೆ. ರಾಜ್ಯದ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,515.
ಪುಲುವಿಲ್ಲಾ ಸೇರಿದಂತೆ ಕರಾವಳಿ ಪ್ರದೇಶದ ಹಲವು ಗ್ರಾಮಗಳು ರಾಜಧಾನಿಗೆ ಹೊಂದಿಕೊಂಡಂತೆ ಇವೆ. ಈ ಪ್ರದೇಶಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಕಠಿಣ ಕಂಟೈನ್ಮೆಂಟ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ಮಾತನಾಡಿದ್ದು, "ತಿರುವನಂತಪುರದ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಕೋವಿಡ್ - 19 ಪ್ರಕರಣಗಳು ದಾಖಲಾಗಿವೆ. ಪರಿಸ್ಥಿತಿಯನ್ನು ಅವಲೋಕನ ಮಾಡಿದ ಬಳಿಕ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಕರಾವಳಿ ಪ್ರದೇಶದಲ್ಲಿನ ಗ್ರಾಮಗಳನ್ನು ಮೂರು ಝೋನ್‌ಗಳಾಗಿ ವಿಂಗಡನೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಯನ್ನು ಪ್ರತಿ ಝೋನ್‌ಗೆ ಉಸ್ತುವಾರಿಯಾಗಿ ನೇಮಕ ಮಾಡಲಾಗುತ್ತದೆ.












Click it and Unblock the Notifications