Breaking; ಶ್ರೀನಗರದಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ
ಶ್ರೀನಗರ, ಜೂನ್ 02; ಕಾಶ್ಮೀರದ ಬುದ್‌ಗಾಮ್‌ನಲ್ಲಿ ವಲಸೆ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುರುವಾರ ರಾತ್ರಿ ಭಯೋತ್ಪಾದಕರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿವೆ.
ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ರಾಜಸ್ಥಾನದ ಹನುಮಾನ್‌ಗಡ ಮೂಲದ ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದೆ.

ಇಬ್ಬರೂ ಸಾವು; ರಾತ್ರಿ 10.55ರ ಮಾಹಿತಿ ಪ್ರಕಾರ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರೂ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಎರಡು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಇದರಿಂದಾಗಿ ಕಣಿವೆ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಗುಂಡಿನ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಂಜೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಜೊತೆ ಸಭೆ ನಡೆಸಿದರು.
ಕಾಶ್ಮೀರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಹಿಂದೂ ಸಮುದಾಯದವರು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಕಾಶ್ಮೀರದಲ್ಲಿ ಪ್ರತಿಭಟನೆ ನಡೆದಿದೆ. ಕಳೆದವಾರ ಶಾಲಾ ಶಿಕ್ಷಕಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಈ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, "ಭಯೋತ್ಪಾದಕರು ಈಗ ಸಾರ್ವಜನಿಕ ಸೇವೆಯಲ್ಲಿ ಕಾರ್ಯ ನಿರ್ವಹಣೆ ಮಾಡುವವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಕಳವಳದ ಸಂಗತಿ. ಈ ಹಿಂಸಾಚಾರವನ್ನು ತಡೆಯಲು ಭದ್ರತಾ ಪಡೆಗಳು ಸೂಕ್ತ ಯೋಜನೆ ರೂಪಿಸಲು ಇದು ಸಕಾಲ" ಎಂದು ಹೇಳಿದ್ದರು.












Click it and Unblock the Notifications