ಜಮ್ಮು-ಕಾಶ್ಮೀರದಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ್, ಸಪ್ಟೆಂಬರ್.22: ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೊಮ್ಮೆ ಬಾಲ ಬಿಚ್ಚಿದ್ದಾರೆ. ಮಂಗಳವಾರ ಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ.
ಜಮ್ಮು ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ಉಗ್ರರು ಅವಿತು ಕುರಿತಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿಯಿತು. ಭದ್ರತಾ ಸಿಬ್ಬಂದಿಯನ್ನು ಕಂಡಾಕ್ಷಣ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಬುದ್ಗಾಮ್ ನಲ್ಲಿರುವ ಚರಾರ್-ಐ-ಶರೀಫ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಸಂಪೂರ್ಣ ಹಿಡಿತ ಸಾಧಿಸಿಕೊಂಡಿದೆ.

ಅವಿತ ಉಗ್ರರ ಪತ್ತೆಗೆ ಕಾರ್ಯಾಚರಣೆ:
ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಹತನಾದ ಉಗ್ರನ ಗುರುತು ಪತ್ತೆ ಹಚ್ಚಲಾಗುತ್ತಿದೆ. ಇನ್ನೊಂದೆಡೆ ಬುದ್ಗಾಮ್ ನಲ್ಲಿರುವ ಚರಾರ್-ಐ-ಶರೀಫ್ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅವಿತು ಕುಳಿತಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ.
ಮೂರು ದಿನಗಳ ಹಿಂದೆ ಎಲ್ಇಟಿ ಉಗ್ರರ ಸೆರೆ:
ಕಳೆದ ಸಪ್ಟೆಂಬರ್.19ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಸೆರೆ ಹಿಡಿದಿತ್ತು.












Click it and Unblock the Notifications