ಜಮ್ಮು & ಕಾಶ್ಮೀರ: ಕೇಂದ್ರದ ವಿರುದ್ಧ ಹೋರಾಟಕ್ಕೆ ಹೊಸ ಮೈತ್ರಿಕೂಟ ರಚನೆ
ಶ್ರೀನಗರ, ಅಕ್ಟೋಬರ್ 15: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಗುರುವಾರ ಮೊದಲ ಬಾರಿಗೆ ಸಭೆ ಸೇರಿದ ಗುಪ್ಕರ್ ಘೋಷಣೆಯ ಸಹಿ ಹಾಕಿರುವ ರಾಜಕೀಯ ಪಕ್ಷಗಳು, ಕಣಿವೆಯಲ್ಲಿ ವಿಶೇಷ ಸ್ಥಾನಮಾನವನ್ನು ಮರಳಿ ಜಾರಿ ಮಾಡುವ ಹೋರಾಟದ ಗುರಿಯೊಂದಿಗೆ ಹೊಸ ಮೈತ್ರಿಕೂಟವನ್ನು ರಚಿಸಿವೆ.
'ನಮ್ಮ ಮೈತ್ರಿಕೂಟಕ್ಕೆ ಗುಪ್ಕರ್ ಘೋಷಣೆಯ ಜನರ ಮೈತ್ರಿಕೂಟ ಎಂದು ಹೆಸರಿಟ್ಟಿದ್ದೇವೆ. ನಮ್ಮ ಹೋರಾಟವು ಸಾಂವಿಧಾನಿಕ ಹೋರಾಟ. ಭಾರತ ಸರ್ಕಾರವು 2019ರ ಆಗಸ್ಟ್ 5ಕ್ಕೂ ಮುನ್ನ ರಾಜ್ಯದ ಜನತೆಗೆ ಇದ್ದ ಹಕ್ಕುಗಳನ್ನು ವಾಪಸ್ ನೀಡುವುದನ್ನು ಬಯಸುತ್ತೇವೆ. ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಮಾನ್ಯತೆಯನ್ನು ಮರಳಿ ತರುವ ಗುರಿ ಹೊಂದಿದ್ದೇವೆ' ಎಂದು ಆರು ರಾಜಕೀಯ ಪಕ್ಷಗಳ ಸಭೆಯ ಬಳಿಕ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದರು.
ಎನ್‌ಸಿ, ಪಿಡಿಪಿ, ಸಿಪಿಎಂ, ಪಿಸಿ, ಜೆಕೆಪಿಎಂ ಮತ್ತು ಎಎನ್‌ಸಿ ಪಕ್ಷಗಳು ಈ ನೂತನವಾಗಿ ರಚಿಸಿದ ಮೈತ್ರಿಕೂಟದ ಭಾಗವಾಗಿವೆ. ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳಲು ಎಲ್ಲ ಜನಪ್ರತಿನಿಧಿಗಳ ನಡುವೆ ಮಾತುಕತೆ ಆರಂಭಿಸಲು ಮೈತ್ರಿಕೂಟ ಒಲವು ಹೊಂದಿದೆ ಎಂದು ಫಾರೂಕ್ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುನ್ನ ಬಂಧಿಸಲಾಗಿದ್ದ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ಬಿಡುಗಡೆಯ ಎರಡು ದಿನಗಳ ನಂತರ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಈ ಸಭೆ ನಡೆಸಲಾಗಿದೆ. ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜದ್ ಲೋನ್, ಪೀಪಲ್ಸ್ ಮೂಮೆಂಟ್ ಮುಖಂಡ ಜಾವೇದ್ ಮಿರ್ ಮತ್ತು ಸಿಪಿಐಎಂ ಮುಖಂಡ ಮೊಹಮದ್ ಯೂಸುಫ್ ತಾರಿಗಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications