ಭಯೋತ್ಪಾದಕರ ಜತೆ ಗುಂಡಿನ ಚಕಮಕಿ; ನಾಲ್ವರು ಭದ್ರತಾ ಸಿಬ್ಬಂದಿ ಸಾವು
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಮಾರ್ಚ್ 1: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರ ಗುಂಡಿನ ಚಕಮಕಿಯಲ್ಲಿ ಅಧಿಕಾರಿ ಸೇರಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಸಿಆರ್ ಪಿಎಫ್ ನ ಇನ್ ಸ್ಪೆಕ್ಟರ್, ಯೋಧ ಹಾಗೂ ಇಬ್ಬರು ಜಮ್ಮು-ಕಾಶ್ಮೀರದ ಪೊಲೀಸರು ಸಾವನ್ನಪ್ಪಿದ್ದಾರೆ.
ಬಾಬಾಗುಂದ್ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುವಾಗ ಪುನರ್ ಆರಂಭವಾದ ಗುಂಡಿನ ಚಕಮಕಿಯಲ್ಲಿ ಈ ಘಟನೆ ನಡೆದಿದೆ. ಧ್ವಂಸವಾಗಿದ್ದ ಮನೆಯೊಂದರಲ್ಲಿ ಸತ್ತಂತೆ ಬಿದ್ದಿದ್ದ ಭಯೋತ್ಪಾದಕನೊಬ್ಬ ದಿಢೀರನೇ ಗುಂಡಿನ ದಾಳಿ ಆರಂಭಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಿಆರ್ ಪಿಎಫ್ ಕಮ್ಯಾಂಡೆಂಟ್ ಸೇರಿ ಎಂಟು ಸಿಬ್ಬಂದಿ ಈ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ. ಗುರುವಾರದಂದು ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂದು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದ್ದರು.












Click it and Unblock the Notifications