ಜಮ್ಮು & ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ 43 ಕೋಟಿ ರೂ ಅಕ್ರಮ: ಫಾರೂಕ್ ಅಬ್ದುಲ್ಲಾ ವಿಚಾರಣೆ
ಶ್ರೀನಗರ, ಅಕ್ಟೋಬರ್ 19: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಫಾರೂಕ್ ಅಬ್ದುಲ್ಲಾ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ವಿಚಾರಣೆಗೆ ಒಳಪಡಿಸುತ್ತಿದೆ.
ಫಾರೂಕ್ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 43 ಕೋಟಿ ರೂ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಚಾರಣೆ ನಡೆಯುತ್ತಿದೆ. ಬ್ಯಾಂಕ್ ದಾಖಲೆಗಳ ಆಧಾರದಲ್ಲಿ ಸೋಮವಾರ ಈ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದ ಅಕ್ರಮದ ಹಗರಣದಲ್ಲಿ ಫಾರೂಕ್ ಅಬ್ದುಲ್ಲಾ ಭಾಗಿಯಾಗಿರುವ ಆರೋಪದಡಿ 2019ರಲ್ಲಿ ಕೂಡ ತನಿಖಾ ಸಂಸ್ಥೆ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಿಕೆಟ್‌ಗೆ ಉತ್ತೇಜನ ನೀಡುವ ಸಲುವಾಗಿ 2002 ರಿಂದ 2011ರ ಅವಧಿಯಲ್ಲಿ ಬಿಸಿಸಿಐ ಸುಮಾರು 113 ಕೋಟಿ ರೂ ಅನುದಾನವನ್ನು ಕ್ರಿಕೆಟ್ ಸಂಸ್ಥೆಗೆ ನೀಡಿತ್ತು. ಅದರಲ್ಲಿ 43 ಕೋಟಿ ರೂ ಹಣವನ್ನು ಫಾರೂಕ್ ಅಬ್ದುಲ್ಲಾ ಹಾಗೂ ಅವರ ಜತೆಗಾರರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಫಾರೂಕ್, ಆಗಿನ ಖಜಾಂಚಿಯೊಂದಿಗೆ ಸೇರಿಕೊಂಡು ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಫಾರೂಕ್ ಅಬ್ದುಲ್ಲಾ ಹೆಸರು ಈ ಆರೋಪದಲ್ಲಿ ಕೇಳಿಬಂದಿರುವುದರಿಂದ ರಾಜ್ಯ ಪೊಲೀಸರು ತನಿಖೆ ನಡೆಸಲು ವಿಫಲರಾಗಿದ್ದರು. ಹೀಗಾಗಿ 2015ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.
2018ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದ ಸಿಬಿಐ, ಜೆಕೆಸಿಎದ ಮಾಜಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ನಾಲ್ವರ ವಿರುದ್ಧ 43.69 ಕೋಟಿ ರೂ ನಿಧಿಯ ಅವ್ಯವಹಾರದ ಆರೋಪ ಹೊರಿಸಿತ್ತು. ಬಳಿಕ ಈ ಹಗರಣದ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.












Click it and Unblock the Notifications