ವೀರ ಯೋಧ, ಹುತಾತ್ಮ ನಜೀರ್ ವನಿಗೆ ಮರಣೋತ್ತರ ಅಶೋಕ್ ಚಕ್ರ
ಶ್ರೀನಗರ್ (ಜಮ್ಮು-ಕಾಶ್ಮೀರ), ಜನವರಿ 24: ಲ್ಯಾನ್ಸ್ ನಾಯ್ಕ್ ನಜೀರ್ ವನಿ 2004ರಲ್ಲಿ ಭಯೋತ್ಪಾದನೆ ತೊರೆದು, ಭಾರತೀಯ ಸೇನೆಗೆ ಸೇರಿದ್ದರು. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಅವರಿಗೆ ಮರಣೋತ್ತರವಾಗಿ ಅಶೋಕ್ ಚಕ್ರ ನೀಡಲಾಗುವುದು. ಸೈನಿಕರೊಬ್ಬರಿಗೆ ಶಾಂತಿ ಕಾಲದಲ್ಲಿ ನೀಡುವ ಅತ್ಯುನ್ನತ ಗ್ಯಾಲಂಟರಿ ಪ್ರಶಸ್ತಿ ಇದು.
ಕಳೆದ ವರ್ಷ ನವೆಂಬರ್ ನಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಕಾರ್ಯಾಚರಣೆ ವೇಳೆ ವನಿ ಹುತಾತ್ಮರಾಗಿದ್ದರು. ಶೋಪಿಯಾನ್ ಗುಂಡಿನ ಚಕಮಕಿಯಲ್ಲಿ ಆರು ಉಗ್ರರನ್ನು ಕೊಲ್ಲಲಾಗಿತ್ತು. ವನಿ ಕಾಶ್ಮೀರದಲ್ಲಿ 162 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ ಸೇರಿದ್ದರು.
2007ರಲ್ಲಿ ಹಾಗೂ ಕಳೆದ ವರ್ಷ ಆಗಸ್ಟ್ ನಲ್ಲಿ ಎರಡು ಬಾರಿ ಸೇನಾ ಪದಕ ಪಡೆದಿದ್ದರು. ಅವರು ಭಾರತೀಯ ಸೇನೆ ಸೇರುವ ಮೊದಲು ಇಖ್ವಾನ್ ನ ಭಾಗವಾಗಿದ್ದರು. ಗಡಿಯಲ್ಲಿ ಒಳನುಸುಳುವುದನ್ನು ತಡೆಯುವ ಸಲುವಾಗಿ 1990ರ ದಶಕದಲ್ಲಿ ರೂಪಿಸಿದ ಪಡೆ ಅದು.

ಇಖ್ವಾನ್ ನಲ್ಲಿ ಮಾಜಿ ಉಗ್ರಗಾಮಿಗಳು ಹಾಗೂ ಹೋರಾಟ ನಡೆಸುತ್ತಿದ್ದ ಉಗ್ರರು ಇರುತ್ತಾರೆ. ಭಯೋತ್ಪಾದನೆ ಮೂಲೋತ್ಪಾಟನೆಗೆ ಕಾರ್ಯ ನಿರ್ವಹಿಸುತ್ತಿದೆ. ಅಂದ ಹಾಗೆ ವನಿ 2004ರಲ್ಲಿ ಭಾರತಿಯ ಸೇನೆಗೆ ಸೇರಿದ್ದರು. ಭಯೋತ್ಪಾದಕರ ಜತೆಗಿನ ಕಾದಾಟದಲ್ಲಿ ವನಿಗೆ ಗುಂಡೇಟು ಬಿದ್ದಿತ್ತು. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊನೆಗೆ ಗಾಯಗಳಿಂದ ಅವರು ಹುತಾತ್ಮರಾಗಿದ್ದರು.
ಲ್ಯಾನ್ಸ್ ನಾಯ್ಕ್ ನಜೀರ್ ವನಿ ಅವರು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯವರು. ಅವರಿಗೆ 38 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.












Click it and Unblock the Notifications