ಜಮ್ಮು-ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: 10 ಮಂದಿಗೆ ಗಂಭೀರ ಗಾಯ
ಶ್ರೀನಗರ, ಅಕ್ಟೋಬರ್ 5: ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಗ್ರೆನೇಡ್ ದಾಳಿ ನಡೆದಿದ್ದು 10 ಮಂದಿಗೆ ಗಂಭೀರ ಗಾಯಗಳಾಗಿವೆ.
ಅನಂತ್‌ನಾಗ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಭಯೋತ್ಪಾದಕರು ಗ್ರೆನೇಟ್ ಸ್ಫೋಟಿಸಿದ್ದಾರೆ.ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು.
ಆದರೆ ಗುರಿ ತಪ್ಪಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. 10 ಜನರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಶ್ರೀನಗರದಿಂದ 55 ಕಿ.ಮೀ. ದೂರದಲ್ಲಿರುವ ಅನಂತ್‍ನಾಗ್ ಪಟ್ಟಣದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಗಸ್ತಿನಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿಯಲ್ಲಿ 12 ವರ್ಷದ ಬಾಲಕ ಸೇರಿದಂತೆ 10 ಮಂದಿ ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟ ಸಂಭವಿಸುತ್ತಿದ್ದಂತೆ ಅಲ್ಲಿನ ಭದ್ರತಾ ಪಡೆ ಸುತ್ತುವರಿದಿದ್ದು, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಬಂಧಿಸಲು ಬೇಟೆ ಪ್ರಾರಂಭಿಸಿದ್ದಾರೆ. ಈವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದ ಕಣಿವೆಯಲ್ಲಿ ಉಗ್ರರು ಭದ್ರತಾ ಪಡೆ ಮೇಲೆ ನಡೆಸುತ್ತಿರುವ ಎರಡನೇ ದಾಳಿ ಇದಾಗಿದೆ.












Click it and Unblock the Notifications