WTC Final 2023: ಭಾರತದ ಸೋಲಿಗೆ ಇದೇ ಕಾರಣ: ನಾಯಕ ರೋಹಿತ್ ಶರ್ಮಾ ಅಸಮಾಧಾನ
ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ್ದ ಭಾರತ ತಂಡ ಎರಡನೇ ಬಾರಿ ಕೂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಭಾರತ ತಂಡವನ್ನು 209 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಎಲ್ಲಾ ಮೂರು ಮಾದರಿಯಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡ ಮೊದಲನೇ ತಂಡ ಎನ್ನುವ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ.
ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ಭಾರತ ತಂಡದ ಬ್ಯಾಟಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಟ್ಟ ಹೊಡೆತಗಳಿಗೆ ಪ್ರಯತ್ನಿಸಿ ಔಟಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡುವಲ್ಲಿ ಎಡವಿದೆವು, ನಮ್ಮ ಬ್ಯಾಟರ್ ಗಳು ಕೆಲವು ಕೆಟ್ಟ ಹೊಡೆತಗಳಿಗೆ ಪ್ರಯತ್ನಿಸಿ ಔಟಾದರು. ಇದು ನಮಗೆ ಆಟದಲ್ಲಿ ಹಿನ್ನಡೆಯಾಗುವಂತೆ ಮಾಡಿತು." ಎಂದು ರೋಹಿತ್ ಶರ್ಮಾ ಹೇಳಿದರು. ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿರುವುದು ನಿಜಕ್ಕೂ ನಿರಾಸೆ ತಂದಿದೆ ಎಂದು ಅವರು ಹೇಳಿದರು.
ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ
ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಮೊದಲ ಇನ್ನಿಂಗ್ಸ್‌ನ ಮೊದಲ ಸೆಷನ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದೆವು, ಆದರೆ ನಂತರ ನಾವು ನಿರಾಶಾದಾಯಕ ಪ್ರದರ್ಶನ ನೀಡಿದೆವು ಎಂದು ಅವರು ಹೇಳಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ (163) ಮತ್ತು ಸ್ಟೀವ್ ಸ್ಮಿತ್ (121) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಎಂದು ರೋಹಿತ್ ಶರ್ಮಾ ಹೇಳಿದರು. ಇಬ್ಬರೂ ಕೂಡ ಅದ್ಭುತ ಪ್ರದರ್ಶನ ನೀಡಿದರು, ಈ ಇಬ್ಬರ ಜೊತೆಯಾಟ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಲು ಕಾರಣವಾಯಿತು ಎಂದರು. ಅವರಿಬ್ಬರ ಬ್ಯಾಟಿಂಗ್ ಮುಂದೆ ನಮ್ಮ ಯಾವ ತಂತ್ರಗಳು ಕೆಲಸ ಮಾಡಲಿಲ್ಲ, ನಿಜಕ್ಕೂ ಅವರ ಬ್ಯಾಟಿಂಗ್ ಉತ್ತಮವಾಗಿತ್ತು ಎಂದರು.
ಮೂರು ಟೆಸ್ಟ್ ಪಂದ್ಯಗಳನ್ನಾಡಿಸಲಿ ಎಂದ ರೋಹಿತ್ ಶರ್ಮಾ
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ವಿಧಾನವನ್ನು ಬದಲಾವಣೆ ಮಾಡಬೇಕು ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 2 ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಿದ ಬಳಿಕ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ, ಒಂದೇ ಪಂದ್ಯದಲ್ಲಿ ವಿಜೇತರನ್ನು ನಿರ್ಧರಿಸುವ ಬದಲು ಮೂರು ಪಂದ್ಯಗಳನ್ನು ಆಡಿಸಿ ಅದರಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದವರನ್ನು ವಿಜೇತರೆಂದು ಘೋಷಿಸಬೇಕು ಎಂದು ರೋಹಿತ್ ಶರ್ಮಾ ಹೇಳಿದರು, ಮುಂದಿನ ಫೈನಲ್‌ನಲ್ಲಿ ಈ ಮಾದರಿ ಜಾರಿಗೆ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.












Click it and Unblock the Notifications