WPL 2027: ಡಬ್ಲ್ಯೂಪಿಎಲ್‌ಗೆ ಮುಹೂರ್ತ ಫಿಕ್ಸ್, ಆರ್‌ಸಿಬಿ ಪ್ಲೇಯಿಂಗ್ 11 ಹೇಗಿರಲಿದೆ? ಇಲ್ಲಿದೆ ಮಾಹಿತಿ
WPL 2027: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಡಬ್ಲ್ಯೂಪಿಎಲ್ 2027ರ 5ನೇ ಆವೃತ್ತಿಗೆ ದಿನಾಂಕ ಮುಹೂರ್ತ ಫಿಕ್ಸ್ ಮಾಡಿದೆ. ಹಾಗಾದ್ರೆ ಮಿನಿ ಹರಾಜು ಹಾಗೂ ಪಂದ್ಯಗಳ ಆರಂಭ ಯಾವಾಗಿನಿಂದ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹಿಳಾ ಪ್ರೀಮಿಯರ್ ಲೀಗ್ 2027ರ ಐದನೇ ಆವೃತ್ತಿಯ ದಿನಾಂಕಗಳನ್ನು ಬಿಸಿಸಿಐ ಘೋಷಣೆ ಮಾಡಿದೆ. ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಪಂದ್ಯಾವಳಿಯು ಮುಂದಿನ ವರ್ಷದ ಜನವರಿ 14 ರಿಂದ ಫೆಬ್ರವರಿ 27ರವರೆಗೆ ನಡೆಯಲಿದೆ. ಪ್ರಸ್ತುತ ಈ ಆವೃತ್ತಿಯ ಪೂರ್ಣ ಪ್ರಮಾಣದ ವೇಳಾಪಟ್ಟಿ ಶೀಘ್ರದಲ್ಲೆ ಬಿರುಗಡೆಯಾಗುವ ಸಾಧ್ಯತೆಯಿದೆ.

ಮಿನಿ ಹರಾಜು ಪ್ರಕ್ರಿಯೆ ಆರಂಭ ಯಾವಾಗ?
ಲೀಗ್ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳಿಗೆ ತಮ್ಮ ತಂಡಗಳನ್ನು ಬಲಪಡಿಸಲು ಅವಕಾಶ ಸಿಗಲಿದೆ. ಪಂದ್ಯಾವಳಿಯ ಐದೂ ತಂಡಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರ್ತಿಯರ ಪಟ್ಟಿಯನ್ನು ಅಂತಿಮಗೊಳಿಸಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ. ಮಿನಿ ಹರಾಜು ಪ್ರಕ್ರಿಯೆಯು ಅಕ್ಟೋಬರ್ 29ರಂದು ಕೊಚ್ಚಿಯಲ್ಲಿ ನಡೆಯುವ ಸಾಧ್ಯತೆಯಿದೆ. ವಿಶೇಷ ಅಂದರೆ ಪುರುಷರ ವಿಭಾಗದ ಹರಾಜು ಕೂಡ ಇದೇ ಸ್ಥಳದಲ್ಲಿ ನಡೆಯುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪಂದ್ಯಗಳು ನಡೆಯುವ ಸ್ಥಳಗಳ ವಿವರ
ಮತ್ತೊಂದೆಡೆ ಡಬ್ಲ್ಯೂಪಿಎಲ್ ಪಂದ್ಯಗಳನ್ನು ಹೊಸ ಕ್ರೀಡಾಂಗಣಗಳಿಗೆ ವಿಸ್ತರಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ, ವಾರಣಾಸಿಯ ನೂತನ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆದಿವೆ. ಈ ಕ್ರೀಡಾಂಗಣವು ಜನವರಿ ಮೊದಲ ವಾರದ ವೇಳೆಗೆ ಪೂರ್ಣವಾಗಿ ಸಿದ್ಧವಾಗಲಿದೆ. ಜೊತೆಗೆ ಮುಂಬೈನ ಬ್ರಾಬೋರ್ನ್ ಮತ್ತು ವಡೋದರದ ಕೋಟಂಬಿ ಕ್ರೀಡಾಂಗಣಗಳು ಸಹ ಪಂದ್ಯಗಳ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಈ ಕುರಿತ ಅಧಿಕೃತ ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ.
ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಆರ್‌ಸಿಬಿ ಸಿದ್ಧತೆ
ಸ್ಮೃತಿ ಮಂಧನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಆಗಿ ಮುಂಬರುವ 2027ರ ಟೂರ್ನಿಗೆ ಪ್ರವೇಶಿಸಲಿದೆ. 2026ರ ರೋಚಕ ಫೈನಲ್ ಹಣಾಹಣಿಯಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್‌ಗಳ ಬೃಹತ್ ಗುರಿಯನ್ನು ಕೇವಲ 19.4 ಓವರ್‌ಗಳಲ್ಲಿ ಮುಗಿಸಿ ಟ್ರೋಫಿ ಎತ್ತಿಹಿಡಿಯಿತು. ಮುಂಬರುವ ಆವೃತ್ತಿಯಲ್ಲೂ ಚಾಂಪಿಯನ್ ಪಟ್ಟ ಮುಂದುವರೆಸುವ ಭರವಸೆಯಲ್ಲಿದೆ.
ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಅತ್ಯಂತ ದುರದೃಷ್ಟಕರ ತಂಡವಾಗಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ, ಸತತ ನಾಲ್ಕೂ ಆವೃತ್ತಿಗಳ (2023, 2024, 2025 ಮತ್ತು 2026) ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳು ತಲಾ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ.
ಯಾವ ತಂಡ ಯಾವಾಗ ಟ್ರೋಫಿ ಗೆದ್ದಿದೆ?
* ಮುಂಬೈ ಇಂಡಿಯನ್ಸ್ - 2023
* ರಾಯಲ್ ಚಾಲೆಂಜರ್ಸ್ ಬೆಂಗಳೂರು - 2024
* ಮುಂಬೈ ಇಂಡಿಯನ್ಸ್ - 2025
* ರಾಯಲ್ ಚಾಲೆಂಜರ್ಸ್ ಬೆಂಗಳೂರು - 2026
ಆರ್‌ಸಿಬಿಯು ಹಾಲಿ ಚಾಂಪಿಯನ್ ಆಗಿರುವುದರಿಂದ ಮಿನಿ ಹರಾಜಿನ ವೇಳೆ ತನ್ನ ಪ್ರಮುಖ ಚಾಂಪಿಯನ್ ಆಟಗಾರ್ತಿಯರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಪ್ರಮುಖ ಭಾರತೀಯ ಆಟಗಾರ್ತಿಯರಾದ ಸ್ಮೃತಿ ಮಂಧನಾ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ರೇಣುಕಾ ಸಿಂಗ್ ಹಾಗೂ ವಿದೇಶಿ ಆಟಗಾರ್ತಿಯರಾದ ಎಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್.
ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಲು ಉತ್ತಮ ಭಾರತೀಯ ಆಲ್ರೌಂಡರ್ ಹಾಗೂ ಹೆಚ್ಚುವರಿ ಸ್ಪಿನ್ ಬ್ಯಾಕಪ್ ಪಡೆಯಲು ಹರಾಜಿನಲ್ಲಿ ಆದ್ಯತೆ ನೀಡುವ ಸಾಧ್ಯತೆಯಿದೆ. ಇನ್ನು ಅಭಿಮಾನಿಗಳು 2027ಕ್ಕೂ ಸಹ ನಮ್ದೇ ಕಪ್ ಎಂದು ಘೋಷವಾಕ್ಯ ಕೂಗಲು ಶುರು ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ಎಲ್ಲರ ಚಿತ್ತರ ಡಬ್ಲ್ಯೂಪಿಎಲ್ ಐದನೇ ಆವೃತ್ತಿಯತ್ತ ನೆಟ್ಟಿದೆ ಅಂತಲೇ ಹೇಳಬಹುದಾಗಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ರಾಧಾ ಯಾದವ್, ನಾಡಿನ್ ಡಿ ಕ್ಲರ್ಕ್, ಸಯಾಲಿ ಸತ್ಘರೆ, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್.


Click it and Unblock the Notifications
