WPL 2026 Final: ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಪಂದ್ಯದ ಸಮಯ, ಸ್ಥಳ, ನೇರಪ್ರಸಾರ, ಪ್ಲೇಯಿಂಗ್ 11 ವಿವರ
WPL 2026 Final: ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2026 ಫೈನಲ್ ಪಂದ್ಯ ಇಂದು (ಫೆಬ್ರವರಿ 5) ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮಹತ್ವದ ಪಂದ್ಯದಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. ಹಾಗಾದ್ರೆ, ಸಮಯ, ಸ್ಥಳ, ನೇರಪ್ರಸಾರ ಹಾಗೂ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ತಂಡವು 2024ರ ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ಇದೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತ್ತು. ಇದೀಗ ಎಡರನೆ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಮತ್ತೊಂದೆಡೆ, ಡೆಲ್ಲಿ ತಂಡವು ಸತತ ನಾಲ್ಕನೇ ಬಾರಿ ಫೈನಲ್ ಪಂದ್ಯವನ್ನು ಆಡುತ್ತಿದ್ದು, ಈ ಬಾರಿ ಮೊದಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಭರವಸೆಯಲ್ಲಿದೆ.

ಆರ್‌ಸಿಬಿ ಬ್ಯಾಟಿಂಗ್, ಬೌಲಿಂಗ್ ವಿಭಾಗ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ, ಭರ್ಜರಿ ಆತ್ಮವಿಶ್ವಾಸದೊಂದಿಗೆ ಈ ಪಂದ್ಯಕ್ಕೆ ಕಾಲಿಡುತ್ತಿದೆ. 2024ರಲ್ಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡ ಈ ಬಾರಿ ಬಲಿಷ್ಠ ತಂಡವನ್ನೇ ಹೊಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಜೋಡಿ ಗ್ರೇಸ್ ಹ್ಯಾರಿಸ್ ಹಾಗೂ ಸ್ಮೃತಿ ಮಂಧಾನಾ ಉತ್ತಮ ಫಾರ್ಮ್‌ನಲ್ಲಿದ್ದು, ಪವರ್‌ಪ್ಲೇ ಓವರ್‌ಗಳಲ್ಲಿ ವೇಗವಾಗಿ ರನ್‌ಗಳನ್ನು ಸಿಡಿಸುತ್ತಾ ಬಂದಿದ್ದಾರೆ. ಇಂದು ಕೂಡ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಆಡುವ ನಿರೀಕ್ಷೆ ಹುಟ್ಟುಹಾಕಿದ್ದಾರೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್, ನಾಡಿನ್ ಡಿ ಕ್ಲರ್ಕ್ ಮತ್ತು ಜಾರ್ಜಿಯಾ ವೋಲ್ ಬ್ಯಾಟ್‌ನಿಂದ ನಿರಂತರವಾಗಿ ಕೊಡುಗೆ ನೀಡುತ್ತಿದ್ದು, ತಂಡದ ಬ್ಯಾಟಿಂಗ್ ಲೈನ್‌ಅಪ್ ಮತ್ತಷ್ಟು ಬಲಿಷ್ಠವಾಗಿದೆ. ಮತ್ತೊಂದೆಡೆ ಬೌಲಿಂಗ್ ವಿಭಾಗದಲ್ಲಿಯೂ ಲಾರೆನ್ ಬೆಲ್ ಹಾಗೂ ಸಯಾಲಿ ಸಾತ್ಘರೆ ಕಡಿಮೆ ರನ್‌ಗಳನ್ನು ನೀಡಿ ನಿಯಮಿತವಾಗಿ ವಿಕೆಟ್‌ಗಳನ್ನು ಕಬಳಿಸುತ್ತಾ ಬಂದಿದ್ದಾರೆ.
ಸ್ಪಿನ್ ವಿಭಾಗದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಉತ್ತಮವಾಗಿ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಇದರಿಂದ ಆರ್‌ಸಿಬಿ ಒಂದು ಸಂಪೂರ್ಣ ಸಮತೋಲನಗೊಂಡ ತಂಡವಾಗಿ ಕಾಣುತ್ತಿದೆ. ಆದ್ದರಿಂದ ಎರಡನೇ ಬಾರಿ ಡಬ್ಲ್ಯುಪಿಎಲ್ ಕಿರೀಟವನ್ನು ಗೆಲ್ಲುವ ಫೇವರಿಟ್ ತಂಡವೆಂದು ಆರ್‌ಸಿಬಿಯನ್ನು ಪರಿಗಣಿಸಲಾಗುತ್ತಿದೆ.
ಡಿಸಿ ಬೌಲಿಂಗ್, ಬ್ಯಾಟಿಂಗ್ ವಿಭಾಗ: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೂಡ ಚೊಚ್ಚಲ ಟ್ರೋಫಿ ಎತ್ತುವ ಭರವಸೆಯಲ್ಲಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯವನ್ನು ಗೆದ್ದು ಫೈನಲ್‌ನಲ್ಲಿ ಡಬ್ಲ್ಯುಪಿಎಲ್ ಟ್ರೋಫಿಗಾಗಿ ಪೈಪೋಟಿ ನಡೆಸುತ್ತಿದೆ. ಈ ಸೀಸನ್‌ನಲ್ಲಿ ಬೌಲಿಂಗ್ ವಿಭಾಗದಲ್ಲಿ ತಂಡ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ.
ಡೆತ್ ಓವರ್‌ಗಳಲ್ಲಿ ಪೇಸರ್ ನಂದನಿ ಶರ್ಮಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದು, ಎಡಗೈ ಸ್ಪಿನ್ನರ್ ಶ್ರೀ ಚರಣಿ ಕೂಡ ಉತ್ತಮವಾಗಿ ಬೌಲಿಂಗ್ ಮಡುತ್ತಾ ಬಂದಿದ್ದಾರೆ ಹಾಗೂ ಮರಿಜಾನ್ನೆ ಕಪ್ ಅವರು ಕೂಡ ಮಾರಕ ಬೌಲಿಂಗ್ ದಾಳಿ ಮಾಡಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇಂದು ಸಹ ಬೌಲಿಂಗ್ ವಿಭಾಗದಲ್ಲಿ ತಂಡ ಇವರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಲಾರಾ ವೊಲ್ವಾರ್ಡ್ಟ್ ಹಾಗೂ ಲಿಜೆಲ್ಲೆ ಲೀ ನಿರಂತರವಾಗಿ ಉತ್ತಮ ಸ್ಪೋಟಕ ಬ್ಯಾಟಿಂಗ್ ಆಡಿದ್ದಾರೆ. ಇನ್ನು ನಾಯಕಿ ಜೆಮಿಮಾ ರೋಡ್ರಿಗಸ್ ಫಾರ್ಮ್‌ಗೆ ಮರಳಿರುವುದು ಡೆಲ್ಲಿ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನಾ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ಸಯಾಲಿ ಸಾತ್ಘರೆ, ಲಾರೆನ್ ಬೆಲ್.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ 11: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ.
ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ, ಡಿಸಿ ಮುಖಾಮುಖಿ ದಾಖಲೆ
* ಒಟ್ಟು ಪಂದ್ಯಗಳು - 9
* ಆರ್‌ಸಿಬಿ ಗೆಲುವು - 3
* ಡೆಲ್ಲಿ ಕ್ಯಾಪಿಟಲ್ಸ್ ಗೆಲುವು - 6
ಡಬ್ಲ್ಯುಪಿಎಲ್ 2026 ಫೈನಲ್ ಸ್ಥಳ, ಸಮಯ, ನೇರಪ್ರಸಾರ
* ಸ್ಥಳ: ವಡೋದರಾದ ಕೋಟಂಬಿ ಸ್ಟೇಡಿಯಂ
* ಟಾಸ್ ಸಮಯ: ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ)
* ಪಂದ್ಯ ಆರಂಭದ ಸಮಯ: ಸಂಜೆ 7.30 ಗಂಟೆಗೆ (ಭಾರತೀಯ ಕಾಲಮಾನ)
* ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಅಥವಾ ಜಿಯೋಹಾಟ್‌ಸ್ಟಾರ್ ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.












Click it and Unblock the Notifications