WPL 2025: ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಗಮನ ಸೆಳೆಯಲಿರುವ ಪ್ರಮುಖ ಆಟಗಾರರು
ಮಹಿಳಾ ಪ್ರೀಮಿಯರ್ ಲೀಗ್ (WPL 2025)ರ ಹರಾಜು ಡಿಸೆಂಬರ್ 15ರ ಭಾನುವಾರದಂದು ನಡೆಯಲಿದೆ. ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಎಲ್ಲಾ 5 ಫ್ರಾಂಚೈಸಿಗಳು ತಂಡದ ಬಲವನ್ನು ಹೆಚ್ಚಿಸಿಕೊಳ್ಳಲು ಯೋಜನೆಯೊಂದಿಗೆ ಹರಾಜಿಗೆ ಬರಲಿವೆ. ಎಲ್ಲಾ ತಂಡಗಳು ಬಹುತೇಕ ಕಳೆದ ಆವೃತ್ತಿಯ ತಂಡವನ್ನೇ ಉಳಿಸಿಕೊಂಡಿದ್ದು ಬೆಂಚ್ ಬಲ ಹೆಚ್ಚಿಸಿಕೊಳ್ಳಲು ಹರಾಜಿನಲ್ಲಿ ಆಟಗಾರರ ಖರೀದಿಗೆ ಮುಂದಾಗಲಿವೆ.
120 ಆಟಗಾರರು ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಸೋಸಿಯೇಟ್ ರಾಷ್ಟ್ರದ ಮೂವರು ಆಟಗಾರರು ಸೇರಿ 91 ಆಟಗಾರರು ಭಾರತೀಯರಾಗಿದ್ದು, 29 ವಿದೇಶಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರಲ್ಲಿ ಗಮನ ಸೆಳೆದಿರುವ ಐವರು ಆಟಗಾರರ ಮಾಹಿತಿ ಇಲ್ಲಿದೆ.

ಸ್ನೇಹ ರಾಣಾ
ಭಾರತ ತಂಡದ ಆಲ್‌ರೌಂಡರ್ ಸ್ನೇಹ ರಾಣಾ ಈ ಬಾರಿ ಹರಾಜಿನಲ್ಲಿ ಗಮನ ಸೆಳೆಯಲಿರುವ ಪ್ರಮುಖ ಆಟಗಾರರಾಗಿದ್ದಾರೆ. ಎರಡು ವರ್ಷ ಗುಜರಾತ್ ಜೈಂಟ್ಸ್ ತಂಡಕ್ಕಾಗಿ ಆಡಿರುವ ಅವರನ್ನು ಈ ಬಾರಿ ಹರಾಜಿಗೆ ಮುನ್ನ ಬಿಡುಗಡೆ ಮಾಡಲಾಗಿದ್ದು, ಬೇರೆ ತಂಡ ಸೇರುವ ವಿಶ್ವಾಸದಲ್ಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈವರೆಗೂ 12 ಪಂದ್ಯಗಳಲ್ಲಿ ಆಡಿದ್ದು ಆರು ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಸ್ನೇಹ್ ರಾಣಾ ಈ ಬಾರಿ ಹರಾಜಿನಲ್ಲಿ ಉತ್ತಮ ಮೊತ್ತ ಪಡೆಯುವ ಸಾಧ್ಯತೆ ಇದೆ.
ಯುವ ಬ್ಯಾಟರ್ ಕಮಲಿನಿ
ತಮಿಳುನಾಡಿ ಆಟಗಾರ್ತಿ ಬ್ಯಾಟಿಂಗ್ ಮೂಲಕ ಭರವಸೆ ಮೂಡಿಸಿರುವ ಯುವ ಆಟಗಾರ್ತಿ ಕಮಲಿನಿ ಜಿ, ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಲವು ಫ್ರಾಂಚೈಸಿಗಳು ಅವರ ಮೇಲೆ ಕಣ್ಣಿಟ್ಟಿದ್ದು ಉತ್ತಮ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆ ಇದೆ.
16 ವರ್ಷ ಕಮಲಿನಿ ಅಂಡರ್ 19 ಮಹಿಳಾ ಟಿ20 ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 311 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ನೆರವಿನಿಂದ ತಮಿಳುನಾಡು ಪ್ರಶಸ್ತಿ ಗೆದ್ದುಕೊಂಡಿದೆ. ಸಿಕ್ಸರ್ ಬಾರಿಸುವಲ್ಲಿ ಸಾಮರ್ಥ್ಯ ಹೊಂದಿದ್ದು ಯಾವುದೇ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸುವ ಭರವಸೆ ಮೂಡಿಸಿದ್ದಾರೆ.
ಉತ್ತರಾಖಂಡದ ನಂದಿನಿ ಕಶ್ಯಪ್
ಭಾರತ ಮಹಿಳಾ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ನಂದಿನಿ ಕಶ್ಯಪ್ ಈ ಬಾರಿ ಹರಾಜಿನಲ್ಲಿ ಗಮನ ಸೆಳೆಯುವ ಮತ್ತೊಬ್ಬ ಆಟಗಾರ್ತಿಯಾಗಿದ್ದಾರೆ. ಉತ್ತರಾಖಂಡ್ ತಂಡಕ್ಕಾಗಿ ಆಡುತ್ತಿರುವ ಅವರು, ಮಹಿಳಾ ಟಿ20 ಟ್ರೋಫಿ ಪಂದ್ಯಾವಳಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಜಾಗ್ರವಿ ಪವಾರ್
ಮುಂಬೈನ ಬಲಗೈ ಮಧ್ಯಮ ವೇಗದ ಬೌಲರ್ ಜಾಗ್ರವಿ ಪವಾರ್ ಇತ್ತೀಚೆಗೆ ನಡೆದ ಮಹಿಳಾ ಟಿ20 ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಅವರ ಬೌಲಿಂಗ್ ನೆರವಿನಿಂದ ಮುಂಬೈ ಪ್ರಶಸ್ತಿ ಗೆದ್ದುಕೊಂಡಿತ್ತು. 11 ಇನ್ನಿಂಗ್ಸ್‌ಗಳಲ್ಲಿ 16 ವಿಕೆಟ್ ಪಡೆದ ಅವರು, ಕೇವಲ 4.02 ಎಕಾನಮಿ ಹೊಂದಿದ್ದಾರೆ.
ರಾಘವಿ ಬಿಸ್ಟ್
ಉತ್ತರಾಖಂಡದ ಮತ್ತೊಬ್ಬ ಭರವಸೆಯ ಬ್ಯಾಟರ್ ರಾಘ್ವಿ ಬಿಸ್ಟ್ ಈ ಬಾರಿ ಹರಾಜಿನಲ್ಲಿ ಉತ್ತಮ ಮೊತ್ತ ಪಡೆಯುವ ಸಾಧ್ಯತೆ ಇದೆ. ತಮ್ಮ ಅತ್ಯುತ್ತಮ ಪ್ರದರ್ಶನದ ಕಾರಣ ಅವರು ರಾಷ್ಟ್ರೀಯ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಎ ತಂಡಕ್ಕಾಗಿ ಕೂಡ ಆಡಿದ್ದು, ಆಸ್ಟ್ರೇಲಿಯಾ ಎ ವಿರುದ್ಧದ ಸತತವಾಗಿ ಮೂರು ಅರ್ಧಶತಕ ಗಳಿಸಿ ಗಮನ ಸೆಳೆದಿದ್ದಾರೆ.












Click it and Unblock the Notifications