RCB Yash Dayal: ಅರೆಸ್ಟ್ ಆಗ್ತಾರಾ ಆರ್‌ಸಿಬಿ ಸ್ಟಾರ್ ಬೌಲರ್ ಯಶ್ ದಯಾಳ್?
RCB Yash Dayal: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಆರ್‌ಸಿಬಿ 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣವೇ ಈ ಬಾರಿ ಬ್ಯಾಟಿಂಗ್‌ನಷ್ಟೇ ಮಾರಕ ಬೌಲಿಂಗ್ ದಾಳಿ ಇದ್ದದ್ದು. ಅದರಲ್ಲೂ ಬಿರುಗಾಳಿ ವೇಗದಲ್ಲಿ ಚೆಂಡನ್ನು ಎಸೆದು ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ಸ್ಫೋಟಕ ಬೌಲರ್ ಯಶ್ ದಯಾಳ್ ಇದೀಗ ಬಹುದೊಡ್ಡ ವಿವಾದದಲ್ಲಿ ಸಿಲುಕಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 17 ಸೀಸನ್‌ಗಳಲ್ಲಿಯೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತ್ತಿಯಲ್ಲಿ ಕೊನೆಗೂ ಟ್ರೋಫಿ ಗೆಲ್ಲುವ ಮೂಲಕ ಅಭಿಮಾನಿಗಳ ಕನಸನ್ನೇನೋ ಈಡೇರಿಸಿತು. ಇದಾದ ಬಳಿಕ ಒಂದಲ್ಲ ಒಂದು ಸಮಸ್ಯೆಗಳನ್ನು ತಂಡಕ್ಕೆ ಎದುರಾಗುತ್ತಲಿವೆ. ಇದೀಗ ಆರ್‌ಸಿಬಿಯ ಮಾರಕ ಬೌಲರ್ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಆರ್‌ಸಿಬಿ ಫೈನಲ್ ಗೆದ್ದ ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಈ ದುರಂತ ಬೆಂಗಳೂರು ತಂಡಕ್ಕೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಇದಾದ ಬಳಿಕ ಹಲವು ಬೆಳವಣಿಗೆಗಳು ಕೂಡ ಆದ್ವು. ಈಗಲೂ ಆಗುತ್ತಲೇ ಇವೆ. ಇದೀಗ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಿಂಸೆ ಹಾಗೂ ವಂಚನೆ ಆರೋಪಗಳು ಕೇಳಿಬಂದಿವೆ.
ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಮಾಡಿದ್ಧಾರೆ. ಈ ಸಂಬಂಧ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ನ್ಯಾಯಕ್ಕಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲು ಮಾಡಿದ್ದು, ಅದರ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ಕಳೆದ 5 ವರ್ಷಗಳಿಂದ ಯಶ್ ದಯಾಳ್ ಜೊತೆ ಸಂಬಂಧ ಹೊಂದಿದ್ದು, ಅವರು ವಿವಾಹ ಆಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ಶೋಷಿಸಿದ್ದಾರೆ. ಜೊತೆಗೆ ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ ಬಳಿಕ ನನಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಯಶ್ ದಯಾಳ್ ತನಗೆ ವಂಚನೆ ಮಾಡುತ್ತಿದ್ದಾರೆ ಎಂದು ತಿಳಿದ ತಕ್ಷಣವೇ ನಾನು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದರಿಂದ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ಎದುರಿಸಿದ್ದೇನೆ. ನನ್ನೊಂದಿಗೆ ಅಷ್ಟೇ ಅಲ್ಲದೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಕೂಡ ಹೊಂದಿದ್ದಾರೆ. ಈ ಬಗ್ಗೆ ನಾನು ಜೂನ್ 14ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದೆ. ಆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪಿಸಿದ್ದಾರೆ.
ಸಂತ್ರಸ್ತೆ ತನ್ನ ಆರೋಪಗಳಲ್ಲಿ ಎಲ್ಲಿಯೂ ಯಶ್ ದಯಾಳ್ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಯಶ್ ದಯಾಳ್ ಅವರೊಂದಿಗೆ ತಾವು ಇರುವ ಫೋಟೋವನ್ನು ಹಂಚಿಕೊಂಡಿರುವುದರಿಂದ ದಯಾಳ್ ವಿರುದ್ಧವೇ ಈ ಮಹಿಳೆ ಆರೋಪ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.
ಇನ್ನೂ ಈ ಸಂಬಂಧ ಯಶ್ ದಯಾಳ್ ಅವರಿಂದ ಇದುವರೆಗೂ ಯಾವುದೇ ಸ್ಪಷ್ಟೀಕರಣ ಅಥವಾ ಹೇಳಿಕೆ ಆಗಲಿ ಬಂದಿಲ್ಲ. ಸಂತ್ರಸ್ತ ಮಹಿಳೆ ಜೂನ್ 21ರಂದು ಸಿಎಂ ಸಹಾಯವಾಣಿಯಲ್ಲಿ ಈ ದೂರು ದಾಖಲಿಸಿದ್ದು, ಜೂನ್ 25ರಂದು ಸಾಮಾಜಿಕ ಜಾಲತಾಣದಲ್ಲಿ ದೂರಿನ ಸ್ಕ್ರೀನ್ ಶಾಟ್‌ಗಳನ್ನು ಪೋಸ್ಟ್ ಮಾಡಿದ್ದರು. ಇದಾದ ಒಂದು ದಿನದ ಬಳಿಕ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಯಶ್ ದಯಾಳ್ ಫಿಯರ್‌ಲೆಸ್ ಎಂದು ಬರೆದುಕೊಂಡಿದ್ದಾರೆ.
ಬಳಿಕ ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿರುವ ಸಂತ್ರಸ್ತೆ ನೀವು ನಿರ್ಭೀತರಾಗಿದ್ದರೆ ಸತ್ಯವನ್ನು ಎದುರಿಸಬೇಕೆಂದು ಬರೆದುಕೊಂಡಿದ್ದಲ್ಲದೆ, ಯಶ್ ದಯಾಳ್ ಜೊತೆಗಿರುವ ಕೆಲ ಫೋಟೋಗಳನ್ನು ಕೂಡ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ಕುರಿತು ಯಶ್ ದಯಾಳ್ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಒಂದು ವೇಳೆ ಪೊಲೀಸರು ತನಿಖೆಗೆ ಮುಂದಾಗಿ ಯಶ್ ದಯಾಳ್ ಮೇಲಿನ ಆರೋಪಗಳೇನಾದ್ರೂ ಸಾಬೀತಾದರೆ ಅವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಲಿದ್ದು, ಪರಿಣಾಮ ಆರ್‌ಸಿಬಿಯಿಂದ ಬ್ಯಾನ್ ಆಗುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಲಾಗುತ್ತಿದೆ.












Click it and Unblock the Notifications