MS Dhoni: ಎಂಎಸ್ ಧೋನಿ ಸಿಎಸ್‌ಕೆ ಪರ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ? ಮುಖ್ಯ ಕೋಚ್ ಕೊಟ್ರು ಬಿಗ್ ಅಪ್ಡೇಟ್
MS Dhoni: ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿಯೊಂದು ಪಂದ್ಯದ ವೇಳೆಯೂ ಅಭಿಮಾನಿಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆಯೆಂದರೆ ಅದು ಎಂ.ಎಸ್ ಧೋನಿ ಆಡುತ್ತಾರಾ? ಎಂಬುದು. ಸದ್ಯ ಧೋನಿ ಅವರ ಲಭ್ಯತೆಯ ಸುತ್ತಲಿನ ಚರ್ಚೆಗಳು ದಿನದಿಂದ ದಿನಕ್ಕೆ ಕಾವೇರುತ್ತಲಿವೆ. ಈ ನಡುವೆಯೇ ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈ ಫ್ರಾಂಚೈಸಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಒಂದು ಪೋಸ್ಟ್, ಧೋನಿ ಕಣಕ್ಕಿಳಿಯಲಿದ್ದಾರೆ ಎಂಬ ಆಸೆಯನ್ನು ಅಭಿಮಾನಿಗಳಲ್ಲಿ ಚಿಗುರಿಸಿತ್ತು. ಹೈದರಾಬಾದ್‌ಗೆ ಧೋನಿ ಆಗಮಿಸಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು.

ಎಂಎಸ್ ಧೋನಿ ಫಿಟ್ನೆಸ್ ಬಗ್ಗೆ ಮಾಹಿತಿ
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ತರಬೇತಿ ಅವಧಿಯಲ್ಲಿ 44 ವರ್ಷದ ಧೋನಿ ಕಾಣಿಸಿಕೊಂಡಿದ್ದರು. ಆದರೂ, ಅವರು ಯಾವುದೇ ಕಠಿಣ ಅಭ್ಯಾಸ ನಡೆಸಲಿಲ್ಲ. ಕೇವಲ ವ್ಯಾಯಾಮ ಮತ್ತು ಸಹ ಆಟಗಾರರೊಂದಿಗೆ ಸುಮ್ಮನೆ ಫುಟ್‌ಬಾಲ್, ವಾಲಿಬಾಲ್ ಆಡುವ ಮೂಲಕ ಸಮಯ ಕಳೆದರು. ಇದು ಅವರು ಇನ್ನೂ ಪೂರ್ಣ ಪ್ರಮಾಣದ ಫಿಟ್ನೆಸ್‌ಗೆ ಮರಳಿಲ್ಲ ಎಂಬುದರ ಸೂಚನೆಯಾಗಿತ್ತು.
ಕೋಚ್ ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯೆ
ಸಿಎಸ್‌ಕೆ ಮುಖ್ಯ ತರಬೇತುದಾರರಾದ ಸ್ಟೀಫನ್ ಫ್ಲೆಮಿಂಗ್ ಅವರು, ಎಂಎಸ್ ಧೋನಿ ಅವರ ಲಭ್ಯತೆಯ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಲಿಲ್ಲ. "ಧೋನಿ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ. ಅವರು ಮಂಡಿ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ," ಎನ್ನುವ ಮಾಹಿತಿಯನ್ನಷ್ಟೇ ನೀಡಿದರು. ಇದು ಅಭಿಮಾನಿಗಳಿಗೆ ಮತ್ತೆ ನಿರಾಸೆ ತರಿಸಿದಂತಿದೆ.
ಮತ್ತೆ ನಿರಾಸೆಗೊಂಡ ಅಭಿಮಾನಿಗಳು
ಪಂದ್ಯದ ಟಾಸ್ ವೇಳೆ ತಂಡದ ಪ್ಲೇಯಿಂಗ್ 11 ಅಥವಾ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಲ್ಲಾಗಲೀ ಧೋನಿ ಹೆಸರು ಇರಲಿಲ್ಲ. ಇದು ಕ್ರೀಡಾಂಗಣಕ್ಕೆ ಧೋನಿ ಆಟ ನೋಡಲು ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ತಂದಿದೆ. ಧೋನಿ ಅವರ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವಿಕೆಯು ಅವರ ಫಿಟ್ನೆಸ್ ಮಟ್ಟವನ್ನು ಅವಲಂಬಿಸಿದ್ದು, ಸದ್ಯಕ್ಕಂತೂ ಅವರ ಮರಳಿ ಬರುವಿಕೆಯು ಒಂದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಈ ಸೀಸನ್‌ನ ಆರಂಭದ ಪಂದ್ಯಗಳಿಂದ ಧೋನಿ ಅವರು ಕಾಲಿನ ಸ್ನಾಯು ಸೆಳೆತದ ಕಾರಣದಿಂದ ದೂರ ಉಳಿದಿದ್ದರು. ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಧೋನಿ ಅವರು ಮೈದಾನಕ್ಕೆ ಇಳಿಯುವ ಸಾಧ್ಯತೆಯಿದೆ.
ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಅವರು ತಂಡದ ಜೊತೆ ಪ್ರಯಾಣಿಸಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಆದರೆ ಆ ಪಂದ್ಯದಲ್ಲಿ ಅವರು ಆಡಲಿಲ್ಲ. ಧೋನಿ ಅವರ ಗೈರುಹಾಜರಿಯಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಧೋನಿ ಮರಳಿದ ನಂತರ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕೇವಲ ಬ್ಯಾಟಿಂಗ್‌ಗೆ ಮಾತ್ರ ಸೀಮಿತವಾಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಧೋನಿ ಅವರ ಪ್ರತಿಯೊಂದು ನಡೆಯೂ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.












Click it and Unblock the Notifications