Ind vs Eng: ಪುಣೆ ಪಂದ್ಯದಲ್ಲಿ ಭಾರತ ಮೋಸದಾಟ ಆಡಿತಾ?
ಇಂಗ್ಲೆಂಡ್ ವಿರುದ್ಧದ 5 ಪಂದ್ಯದಗಳ ಟಿ20 ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದ ಭಾರತ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ. ಶುಕ್ರವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 15 ರನ್‌ಗಳ ಗೆಲುವು ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದುಕೊಂಡಿದೆ. ಆದರೆ ನಾಲ್ಕನೇ ಪಂದ್ಯದಲ್ಲಿ ಭಾರತ ಮೋಸದಾಟ ಆಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿತು. ಶಿವಂ ದುಬೆ 34 ಎಸೆತಗಳಲ್ಲಿ 53 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 30 ಎಸೆತಗಳಲ್ಲಿ 53 ರನ್ ಗಳಿಸಿದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಜೇಮೀ ಓವರ್ಟನ್ ಎಸೆತದಲ್ಲಿ ಹೆಲ್ಮೆಟ್‌ಗೆ ಬಿದ್ದ ಕಾರಣ ಅವರು ಪಂದ್ಯದಿಂದ ಹೊರಗುಳಿದರು.

ಶಿವಂ ದುಬೆ ತಲೆಗೆ ಚೆಂಡು ಬಡಿದ ಪರಿಣಾಮ ಬದಲೀ ಆಟಗಾರನಾಗಿ ಹರ್ಷಿತ್ ರಾಣಾ ಕಣಕ್ಕಿಳಿದರು. 4 ಓವರ್ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದ ಅವರು, ಅನಿರೀಕ್ಷಿತವಾಗಿ ಸಿಕ್ಕ ಅವಕಾಶದಲ್ಲಿ ಮಿಂಚಿದರು. ಆದರೆ ದುಬೆ ಬದಲಾಗಿ ಹರ್ಷಿತ್ ರಾಣಾ ಬದಲೀ ಆಟಗಾರನಾಗಿ ಆಡಿದ್ದು ವಿವಾದಕ್ಕೆ ಕಾರಣವಾಗಿದೆ.
ಇಂಗ್ಲೆಂಡ್ ನಾಯಕನ ಅಸಮಾಧಾನ
ಪಂದ್ಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ನಾವು ಇದನ್ನು ಒಪ್ಪುವುದಿಲ್ಲ, ಶಿವಂ ದುಬೆ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದು ಅವರ ಬದಲಾಗಿ ಹರ್ಷಿತ್ ರಾಣಾ ಬದಲೀ ಆಟಗಾರನಾಗಿ ಬಂದಿದ್ದು ನಾವು ಒಪ್ಪುವುದಿಲ್ಲ, ಆದರೆ ಇದು ಆಟದ ಭಾಗ ಎಂದರು.
ಬದಲೀ ಆಟಗಾರನ ಹೆಸರು ಸೂಚಿಸುವ ಮೊದಲು ನಮ್ಮೊಂದಿಗೆ ಯಾವುದೇ ಸಮಾಲೋಚನೆ ಮಾಡಲಿಲ್ಲ. ನಾನು ಬ್ಯಾಟಿಂಗ್ ಮಾಡಲು ಬಂದಾಗ ಹರ್ಷಿತ್ ರಾಣಾ ಯಾರ ಬದಲಾಗಿ ಬಂದಿದ್ದಾರೆ ಎಮದು ಯೋಚಿಸಿದೆ. ಬಳಿಕ ಅವರು ಕನ್ಕ್ಯುಶನ್ ಬದಲಿ ಎಂದರು, ನಾನು ಅದನ್ನು ಒಪ್ಪಲಿಲ್ಲ. ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದರು, ಆದರೆ ನಮಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಈ ಬಗ್ಗೆ ಸ್ಪಷ್ಟನೆ ಪಡೆಯಲು ನಾವು ರೆಫರಿ ಜಾವಗಲ್ ಶ್ರೀನಾಥ್‌ರನ್ನು ಪ್ರಶ್ನೆ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ಪೆಟ್ಟು ಬಿದ್ದು ಬ್ಯಾಟರ್ ಔಟ್ ಆದರೆ ಬ್ಯಾಟರ್ ಅವರನ್ನೇ ಬದಲೀ ಆಟಗಾರನಾಗಿ ಆಡಬೇಕು. ಆದರೆ ಇಲ್ಲಿ ಬ್ಯಾಟರ್ ಬದಲಾಗಿ ಬೌಲರ್ ಬಂದಿದ್ದಾರೆ ಎಂದು ಇಂಗ್ಲೆಂಡ್ ಅಸಮಾಧಾನ ವ್ಯಕ್ತಪಡಿಸಿದೆ.
ಹಲವು ಭಾರತೀಯ ಅಭಿಮಾನಿಗಳು ಕೂಡ ಇದನ್ನು ಸರಿಯಲ್ಲ ಎಂದು ಹೇಳಿದ್ದಾರೆ. ಶಿವಂ ದುಬೆ ಆಲ್‌ರೌಂಡರ್ ಆದರೂ ಅವರು ಬ್ಯಾಟರ್ ಆಗಿದ್ದಾರೆ. ಹರ್ಷಿತ್ ರಾಣಾ ಒಬ್ಬ ಬೌಲರ್ ಅವರು ಆಲ್‌ರೌಂಡರ್ ಕೂಡ ಅಲ್ಲ, ದುಬೆ ಬದಲಾಗಿ ಹರ್ಷಿತ್ ರಾಣಾ ಆಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications