WI vs SL: ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್; ಫೈನಲ್‌ನಲ್ಲಿ ಭಾರತಕ್ಕೆ ಸವಾಲು
ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಟಿನೋ ಬೆಸ್ಟ್ ಮಾರಕ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಶ್ರೀಲಂಕಾ ಮಾಸ್ಟರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತು. ನಾಯಕ ಬ್ರಿಯಾನ್ ಲಾರಾ 33 ಎಸೆತಗಳಲ್ಲಿ 41 ರನ್ ಗಳಿಸಿದರೆ, ವಾಲ್ಟನ್ 31 ರನ್ ಗಳಿಸಿದರು, ದಿನೇಶ್ ರಾಮ್‌ದಿನ್ 22 ಎಸೆತಗಳಲ್ಲಿ ಅಜೇಯ 50 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಸವಾಲಿನ ಮೊತ್ತ ಕಲೆಹಾಕಲು ಕಾರಣವಾದರು.

ಈ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 173 ರನ್ ಗಳಿಸುವ ಮೂಲಕ ರೋಚಕ ಸೋಲು ಕಂಡಿತು. ಅಸೆಲಾ ಗುಣರತ್ನೆ 42 ಎಸೆತಗಳಲ್ಲಿ 66 ರನ್ ಗಳಿಸಿದರೂ ತಂಡದ ಸೋಲನ್ನು ತಪ್ಪಿಸಲು ಆಗಲಿಲ್ಲ, ಇಸುರು ಉಡಾನ 10 ಎಸೆತಗಳಲ್ಲಿ 21 ರನ್ ಗಳಿಸಿ ಶ್ರೀಲಂಕಾಗೆ ಗೆಲುವಿನ ಆಸೆ ಮೂಡಿಸಿದ್ದರೂ ಅವರು ಔಟ್ ಆದ ಬಳಿಕ ಶ್ರೀಲಂಕಾ ಸೋಲೊಪ್ಪಿಕೊಂಡಿತು.
ಟಿನೋ ಬೆಸ್ಟ್ 4 ಓವರ್ ಗಳಲ್ಲಿ 27 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡ್ವಾನೆ ಸ್ಮಿತ್ 2 ವಿಕೆಟ್ ಪಡೆದರೆ, ಆಶ್ಲೆ ನರ್ಸ್, ಜೆರೋಮ್ ಟೇಲರ್, ಲೆಂಡಲ್ ಸಿಮನ್ಸ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ಈ ಸೋಲಿನೊಂದಿಗೆ ಶ್ರೀಲಂಕಾ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ವೆಸ್ಟ್ ಇಂಡೀಸ್ ಫೈನಲ್ ಪ್ರವೇಶಿಸಿದೆ. ಮಾರ್ಚ್ 16ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ ನಿವೃತ್ತಿ ಹೊಂದಿರುವ ಲೆಜೆಂಡ್ ಆಟಗಾರರು ಮತ್ತೊಮ್ಮೆ ಮೈದಾನಕ್ಕಿಳಿದಿದ್ದು ಅಭಿಮಾನಿಗಳ ಮನಗೆದ್ದಿದೆ.












Click it and Unblock the Notifications