ವೈಭವ್ ಸೂರ್ಯವಂಶಿ ಸಾಮಾನ್ಯ ಆಟಗಾರನಲ್ಲ: ವಿ.ವಿ.ಎಸ್ ಲಕ್ಷ್ಮಣ್ ಈ ಹೇಳಿಕೆ ಹಿಂದಿದೆ ದೊಡ್ಡ ಸಂದೇಶ
Vaibhav Sooryavanshi: ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಅದರಲ್ಲೂ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಆಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ 15 ವರ್ಷದ ವೈಭವ್ ಸೂರ್ಯವಂಶಿಯನ್ನು ವಿ.ವಿ.ಎಸ್. ಲಕ್ಷ್ಮಣ್ ಅವರು ಕೊಂಡಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವು 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇನ್ನೂ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ಹರಾರೆಯಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 'ವಂಡರ್ ಕಿಡ್' ಕೇವಲ 49 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ಗಳ ಸಹಿತ 81 ರನ್ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಈ ಬಾಲಕನ ಆಕ್ರಮಣಕಾರಿ ಆಟಕ್ಕೆ ಭಾರತದ ಹಂಗಾಮಿ ಮುಖ್ಯ ತರಬೇತುದಾರ ವಿ.ವಿ.ಎಸ್. ಲಕ್ಷ್ಮಣ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಆಟಕ್ಕೆ ವಿ.ವಿ.ಎಸ್ ಲಕ್ಷ್ಮಣ್ ಮೆಚ್ಚುಗೆ
ಈ ಕುರಿತು ಮಾತನಾಡಿದ ವಿ.ವಿ.ಎಸ್. ಲಕ್ಷ್ಮಣ್ ಅವರು, 'ವೈಭವ್ ಪ್ರತಿಯೊಂದು ಪಂದ್ಯ ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ತನ್ನ ಆಟವನ್ನು ಸುಧಾರಿಸಿಕೊಳ್ಳುತ್ತಾನೆ. ಕೇವಲ ಪಂದ್ಯಗಳನ್ನಷ್ಟೇ ಅಲ್ಲದೆ, ಪ್ರತಿಯೊಂದು ಅಭ್ಯಾಸದ ಅವಧಿಯನ್ನು ಗಂಭೀರವಾಗಿ ವಿಮರ್ಶೆ ಮಾಡಿಕೊಳ್ಳುವುದು ಅವನ ವಿಶೇಷತೆ,' ಎಂದು ಕೊಂಡಾಡಿದ್ದಾರೆ.
ಜವಾಬ್ದಾರಿಯುತ ಆಟ ಆಡಿದ 'ವಂಡರ್ ಕಿಡ್'
ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್, ಮೂರನೇ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ವಾಬ್ದಾರಿಯುತ ಆಟ ಆಡಿದರು. ಈ ವೇಳೆ ಪರಿಸ್ಥಿತಿಗೆ ತಕ್ಕಂತೆ ತನ್ನ ತಂತ್ರವನ್ನು ಬದಲಾಯಿಸಿಕೊಂಡರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ನಂತರ ಆಕ್ರಮಣಕಾರಿ ಆಟ ಆಡಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 81 ರನ್‌ಗಳನ್ನು ಕಲೆಹಾಕಿ ಮಿಂಚಿದರು.
'ಪ್ರತಿಸ್ಪರ್ಧಿಗಳ ತಂತ್ರಕ್ಕೆ ವೈಭವ್ ಪ್ರತ್ಯುತ್ತರ'
'ಜಿಂಬಾಬ್ವೆ ಬೌಲರ್‌ಗಳು ವೈಭವ್ ಸೂರ್ಯವಂಶಿ ಅವರನ್ನು ಕಟ್ಟಿಹಾಕಲು ವಿಶೇಷ ಯೋಜನೆಗಳೊಂದಿಗೆ ಬಂದಿದ್ದರು. ಆದರೆ ಎದುರಾಳಿಗಳ ಪ್ರತಿಯೊಂದು ತಂತ್ರವನ್ನು ಮೆಟ್ಟಿ ನಿಂತ ವೈಭವ್ ರನ್‌ಗಳ ಸುರಿಮಳೆ ಹರಿಸಿದರು,' ಎಂದು ವಿ.ವಿ.ಎಸ್. ಲಕ್ಷ್ಮಣ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಪಂದ್ಯದ ವೇಳೆ ಗಾಯಗೊಂಡರೂ ಮೈದಾನದಿಂದ ಹೊರಗಡೆ ಹೋಗದೆ ತಂಡಕ್ಕಾಗಿ ಆಟ ಮುಂದುವರಿಸಲು ಈ ಬಾಲಕ ತೋರಿಸಿದ ಉತ್ಸಾಹವನ್ನು ಲಕ್ಷ್ಮಣ್ ನೆನಪಿಸಿಕೊಂಡರು.
ವೈಭವ್ ಮೇಲೆ ಲಕ್ಷ್ಮಣ್ ದೊಡ್ಡ ಭರವಸೆ
'ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಆಡಿದ ಅನುಭವ ಹಾಗೂ ಪ್ರಸಕ್ತ ಸರಣಿಯಲ್ಲಿ ಆತನ ಕ್ರೀಡಾ ಮನೋಭಾವ ಮತ್ತು ಬೆಳೆಯುವ ಹಸಿವು ನಿಜಕ್ಕೂ ಶ್ಲಾಘನೀಯ. 100 ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರ ಆತನಲ್ಲಿದೆ. ಆದರೂ ಅವನಿಗೆ ಇನ್ನೂ ತುಂಬಾ ಸಮಯ ಇದೆ. ಮುಂದಿನ ದಿನಗಳಲ್ಲಿ ಆ ಸಾಧನೆಯನ್ನು ಮಾಡುತ್ತಾನೆ ಎನ್ನುವ ಭರವಸೆ ನನಗಿದೆ,' ಎಂದು ಹೇಳಿದರು.
'ಆತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆಗಳನ್ನು ಬರೆಯುವ ಎಲ್ಲಾ ಸಾಮರ್ಥ್ಯ ಹೊಂದಿದ್ದಾನೆ,' ಎಂದು ಲಕ್ಷ್ಮಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿಯನ್ನು ಬೆಂಬಲಿಸಿದ ವಿ.ವಿ.ಎಸ್.ಎಲ್ ಅವರಿಗೆ ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.


Click it and Unblock the Notifications
