Virat Kohli Century IPL 2023: 1490 ದಿನಗಳ ಬಳಿಕ ಐಪಿಎಲ್‌ನಲ್ಲಿ ಶತಕ ಸಿಡಿಸಿದ 'ಕಿಂಗ್ ಕೊಹ್ಲಿ'
ಹೈದರಾಬಾದ್‌ನ ಉಪ್ಪಾಳದಲ್ಲಿ ವಿರಾಟ್ ಕೊಹ್ಲಿ ಅಕ್ಷರಶಃ ಅಬ್ಬರಿಸಿದರು, ಬರೋಬ್ಬರಿ 1490 ದಿನಗಳ ಕಾಯುವಿಕೆಗೆ ಅಂತ್ಯ ಹಾಡಿದ ಅವರು ಐಪಿಎಲ್‌ನಲ್ಲಿ ತಮ್ಮ 6ನೇ ಶತಕ ಸಿಡಿಸಿದರು. ಗುರುವಾರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 100 ರನ್ ಗಳಿಸಿದರು, ಕೊಹ್ಲಿ ಅಬ್ಬರ ಬ್ಯಾಟಿಂಗ್ ನೆರವಿನಿಂದ ಆರ್ಸಿಬಿ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಸನ್‌ರೈಸರ್ಸ್ ಹೈದರಾಬಾದ್ ಬ್ರೇಸ್‌ವೆಲ್ ಬೌಲಿಂಗ್‌ನಲ್ಲಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಹೆನ್ರಿಕ್ ಕ್ಲಾಸೆನ್ ಅಮೋಘ ಬ್ಯಾಟಿಂಗ್ ಮಾಡಿದರು.

ಹೆನ್ರಿಚ್ ಕ್ಲಾಸೆನ್ ಕೇವಲ 51 ಎಸೆತಗಳಲ್ಲಿ 8 ಬೌಂಡರಿ 6 ಸಿಕ್ಸರ್ ಸಹಿತ 104 ರನ್ ಗಳಿಸಿದರು. ಕ್ಲಾಸೆನ್ ಅವರ ಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 27 ರನ್ ಗಳಿಸಿ ಗಮನ ಸೆಳೆದರು.
ಕೊಹ್ಲಿ ಅಬ್ಬರದ ಮುಂದೆ ಮಂಕಾದ ಸನ್‌ರೈಸರ್ಸ್
ಸವಾಲಿನ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ಅದ್ಭುತ ಆರಂಭವನ್ನು ಪಡೆಯಿತು. ಭುವನೇಶ್ವರ್ ಕುಮಾರ್ ಬೌಲಿಂಗ್‌ನ ಮೊದಲ ಎಸೆತದಲ್ಲೇ ಕೊಹ್ಲಿ ಬೌಂಡರಿ ಬಾರಿಸಿದರು. ಆರಂಭದಿಂದಲೇ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮಾಡಲು ಆರಂಭಿಸಿದರೆ, ಫಾಪ್ ಡುಪ್ಲೆಸಿಸ್ ಕೂಡ ಇನ್ನೊಂದೆಡೆ ರನ್ ಗಳಿಸುತ್ತಿದ್ದರು.

6 ಓವರ್ ಗಳ ಪವರ್ ಪ್ಲೇನಲ್ಲಿ ಈ ಜೋಡಿ 64 ರನ್ ಗಳಿಸುವ ಮೂಲಕ ಮಿಂಚಿದರು. ಮಧ್ಯಮ ಓವರ್ ಗಳಲ್ಲಿ ಕೂಡ ಯಾವುದೇ ಒತ್ತಡಕ್ಕೆ ಒಳಗಾಗದೇ ಪ್ರತಿ ಓವರ್ ನಲ್ಲಿ ಬೌಂಡರಿ ಗಳಿಸುವ ಮೂಲಕ ರನ್ ಕಲೆ ಹಾಕಿದರು. 17.4ನೇ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಕೊಹ್ಲಿ ಐಪಿಎಲ್‌ನಲ್ಲಿ 6ನೇ ಶತಕ ಸಿಡಿಸಿ ಮಿಂಚಿದರು. ಇಡೀ ಕ್ರೀಡಾಂಗಣವೇ ಅವರ ಶತಕವನ್ನು ಸಂಭ್ರಮಿಸಿತು.
ಶತಕ ಗಳಿಸಿ ಮುಂದಿನ ಎಸೆತದಲ್ಲೇ ಅವರು ಗ್ಲೆನ್ ಫಿಲಿಪ್ಸ್‌ಗೆ ಕ್ಯಾಚ್ ನೀಡಿ ಔಟಾದರು. 63 ಎಸೆತಗಳಲ್ಲಿ 12 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 100 ರನ್ ಗಳಿಸಿದರು. 2016 ರ ಮೇ 18ರಂದು ಕೂಡ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಶತಕ ಗಳಿಸಿದ್ದರು, ಈಗ ಮತ್ತೆ ಮೇ 18 ರಂದು ಶತಕ ಗಳಿಸಿದ್ದಾರೆ, ಅವರ ಜೆರ್ಸಿ ಸಂಖ್ಯೆ ಕೂಡ 18 ಎನ್ನುವುದು ವಿಶೇಷ.
ಅಂತಿಮವಾಗಿ ಆರ್ ಸಿಬಿ 19.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 187 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್ ಸಿಬಿ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಮೇ 21ರಂದು ಭಾನುವಾರ ನಡೆಯುವ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದ್ದಾರೆ.












Click it and Unblock the Notifications