Virat Kohli: ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟ ವಿರಾಟ್ ಕೊಹ್ಲಿ
ಐಪಿಎಲ್ 2024ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ 71.43 ಸರಾಸರಿಯಲ್ಲಿ 500 ರನ್ ಗಳಿಸಿದ್ದು, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಾಲ್ಕು ಅರ್ಧಶತಕ, ಒಂದು ಶತಕ ಕೂಡ ಬಾರಿಸಿದ್ದಾರೆ.
ಕೊಹ್ಲಿ ಸತತವಾಗಿ ರನ್ ಗಳಿಸಿದರೂ ಅವರ ವಿರುದ್ಧ ಟೀಕೆಗಳು ಮಾತ್ರ ನಿಂತಿಲ್ಲ. 147.49 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೂ, ಸದ್ಯದ ಟಿ20 ಕ್ರಿಕೆಟ್‌ನಲ್ಲಿ ಇದು ಕೆಟ್ಟ ಸ್ಟ್ರೈಕ್‌ರೇಟ್, ಕೊಹ್ಲಿ ಟಿ20 ಕ್ರಿಕೆಟ್ ಆಡಲು ಲಾಯಕ್ಕಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಕೆಲವು ಮಾಜಿ ಕ್ರಿಕೆಟಿಗರೂ ಕೂಡ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ಬಗ್ಗೆ ಟೀಕೆ ಮಾಡಿದ್ದರು.

ತಮ್ಮ ವಿರುದ್ಧದ ಟೀಕೆಗಳಿಗೆ ಮೈದಾನದಲ್ಲಿ ಮತ್ತು ಮೈದಾನದ ಹೊರಗಡೆ ವಿರಾಟ್ ಕೊಹ್ಲಿ ಉತ್ತರ ಕೊಟ್ಟಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿದ್ದರು, 6 ಬೌಂಡರಿ 3 ಸಿಕ್ಸರ್ ಕೂಡ ಇದ್ದವು, 159 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಸ್ಪಿನ್ ವಿರುದ್ಧ ಕೊಹ್ಲಿ ಉತ್ತಮವಾಗಿ ಆಡಲ್ಲ ಎನ್ನುವ ಟೀಕೆಗಳಿಗೂ ಉತ್ತರ ಕೊಟ್ಟರು. ಸಾಯಿ ಸುದರ್ಶನ್ ಅವರಿಗೆ ಎರಡು ಸಿಕ್ಸರ್ ಸಿಡಿಸಿದರು.
ಟೀಕಾಕಾರರಿಗೆ ಖಡಕ್ ಉತ್ತರ
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ತಮ್ಮ ವಿರುದ್ಧದ ಟೀಕೆಗಳಿಗೂ ಉತ್ತರ ಕೊಟ್ಟರು. "ಸ್ಟ್ರೈಕ್-ರೇಟ್ ಬಗ್ಗೆ ಮಾತನಾಡುವ ಎಲ್ಲರಿಗೂ ಮತ್ತು ನಾನು ಸ್ಪಿನ್ ಬೌಲಿಂಗ್‌ಗೆ ಚನ್ನಾಗಿ ಆಡಲ್ಲ ಎನ್ನುವ ಜನರಿಗೆ ಇಂದು ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ. 15 ವರ್ಷಗಳಿಂದ ತಂಡದ ಗೆಲುವಿಗಾಗಿ ನಾನು ಆಡುತ್ತಿದ್ದೇನೆ, ನಿಮ್ಮ ತಂಡ ಗೆಲುವು ಸಾಧಿಸಿದೆ ಎಂದರೆ ಸಾಕು. ಬಾಕ್ಸ್‌ನಲ್ಲಿ ಕೂತು ಮಾತನಾಡುವವರು ಏನು ಬೇಕಾದರು ಮಾತನಾಡಲಿ." ಎಂದು ಹೇಳಿದರು.
ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ಹತ್ತಿರವಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಕೆಲವರು ವಿರಾಟ್ ಕೊಹ್ಲಿ ಟಿ20 ತಂಡಕ್ಕೆ ಬೇಡ ಎಂದರೆ, ಮತ್ತಷ್ಟು ಮಾಜಿ ಆಟಗಾರರು ಕೊಹ್ಲಿ ಇರಲೇಬೇಕು ಎಲ್ಲಾ ಸಂದರ್ಭದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುವ ಬದಲಾಗಿ, ಸಮಯಕ್ಕೆ ತಕ್ಕಂತೆ ಆಡುವ ಆಟಗಾರ, ಅನುಭವಿ ಬೇಕು ಎಂದಿದ್ದಾರೆ.
ಮುಂದಿನ ಎರಡು ಮೂರು ದಿನಗಳಲ್ಲಿ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಘೋಷಿಸುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದು, ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications