Vijay Mallya: ಐಪಿಎಲ್ 2025 ಟ್ರೋಫಿ ಎತ್ತುವುದೇ ನಮ್ಮ ತಂಡ; ಆರ್‌ಸಿಬಿ ತಂಡಕ್ಕೆ ವಿಜಯ್ ಮಲ್ಯ ಕಿವಿ ಮಾತು ಏನು?
IPL RCB Vs LSG: ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 17 ಸೀಸನ್‌ಗಳಿಂದಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ, ಈ ಬಾರಿ ಅಂದರೆ 2025ರ 18ನ ಸೀಸನ್‌ನ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಕ್ವಾಲಿಫೈಯರ್ ಪ್ರವೇಶದ ಹಂತಕ್ಕೆ ಬಂದು ತಲುಪಿದೆ. ಅದು ಮಂಗಳವಾರ ನಡೆದ ಎಲ್‌ಎಸ್‌ಜಿ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಈ ಹಂತ ತಲುಪಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 19 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇ ಏರಿದೆ. ಪ್ರಥಮ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ನೆಲೆಯೂರಿದೆ. ಇನ್ನು ಆರ್‌ಸಿಬಿ ಗೆದ್ದು ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುತ್ತಿದ್ದಂತೆ ವಿಜಯ್ ಮಲ್ಯ ಟ್ವೀಟ್ ಮಾಡಿ ರಾಯಲ್ ಹುಡುಗ್ರುಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ರೊಫಿ ಗೆಲ್ಲುವ ತಂಡದ ಭವಿಷ್ಯವನ್ನು ಸಹ ನುಡಿದಿದ್ದಾರೆ.
ವಿಜಯಲ್ ಮಲ್ಯ ಹೇಳಿದ್ದೇನು?: "ಎಲ್‌ಎಸ್‌ಜಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿಗೆ ಅಭಿನಂದನೆಗಳು. ಬಲಿಷ್ಠ ತಂಡವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯದಲ್ಲಿ ಹೀಗೆ ಆಟ ಮುಂದುವರೆಸಿದರೆ ಐಪಿಎಲ್ ಟ್ರೋಫಿ ಗೆಲುವು ಖಚಿತ," ಎಂದು ವಿಜಯ್ ಮಲ್ಯ ಟ್ವೀಟ್ ಬರೆದುಕೊಳ್ಳುವ ಮೂಲಕ ಭವಿಷ್ಯ ನುಡಿದಿದ್ದಾರೆ. ಇದೇ ಮೊದಲಲ್ಲ, ಈ ಸೀಸನ್ ಆರಂಭದಿಂದಲೂ ಆರ್‌ಸಿಬಿ ಗೆದ್ದಾಗಲೆಲ್ಲಾ ಅವರು ಅಭಿನಂದನೆ ತಿಳಿಸಿದ್ದಾರೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಲಕ್ನೋ ಸೂಪರ್ ಜೈಂಟ್ಸ್ ಪಡೆ ಬೃಹತ್ ರನ್‌ಹಳನ್ನು ಕಲೆಹಾಕಿತು. ಅದರಲ್ಲೂ, ಈ ಸೀಸನ್ ಆರಂಭದಿಂದಲೂ ಫ್ಲಾಪ್ ಆಗಿದ್ದ ಎಲ್‌ಎಸ್‌ಜಿ ನಾಯಕ ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಿಸಿ ಮಿಂಚಿ ಸಂಭ್ರಾಮಾಚರಣೆಯನ್ನು ಸಹ ಮಾಡಿದರು.
ಎಲ್‌ಎಸ್‌ಜಿ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 227 ರನ್‌ಗಳನ್ನು ಕಲೆಹಾಕಿ ಆರ್‌ಸಿಬಿಗೆ 228 ಬೃಹತ್ ರನ್‌ಗಳ ಗುರಿ ನೀಡಿತು. ತಂಡದ ಮೊತ್ತ ಇಲ್ಲಿಯವರೆಗೂ ಬರಲು ಕಾರಣವೇ ನಾಯಕ ಪಂತ್ ಸಿಡಿಸಿದ ಶತಕ ಎಂದರೆ ತಪ್ಪಾಗಲಾರದು. ಬಳಿಕ ಲಕ್ನೋ ನೀಡಿದ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.4 ಓವರ್‌ಗಳಿಗೆ ಮುಟ್ಟಿ ಭರ್ಜರಿ ಗೆಲುವು ಸಾಧಿಸಿತು. 4 ವಿಕೆಟ್ ಕಳೆದುಕೊಂಡ ಆರ್‌ಸಿಬಿ 230 ರನ್ ಕಲೆಹಾಕಿ ಗೆಲುವಿನ ನಗೆ ಬೀರಿ ಕ್ವಾಲಿಫೈಯರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು.
ಎಲ್‌ಎಸ್‌ಜಿ ತಂಡಕ್ಕಿಂತ ನಾವೇನು ಕಡಿಮೆ ಇಲ್ಲವೆಂಬಂತೆ ಆರ್‌ಸಿಬಿ ಆಟಗಾರರು ತೋರಿಸಿಕೊಟ್ಟರು. ಆರ್‌ಸಿಬಿ ಪರ ಫಿಲ್ ಸಾಲ್ಟ್ ಹಾಗೂ ಉತ್ತಮ ಆರಂಭ ನೀಡಿದರು. ಬಳಿಕ ಬಂದ ಪಾಟೀದಾರ್ ಬೃಹತ್ ರನ್ ಕಲೆಹಾಕುವಲ್ಲಿ ಎಡವಿದರು. ಇವರ ನಂತರ ಬಂದ ಲಿವಿಂಗ್‌ಸ್ಟೋನ್ ಸಹ ಡಕ್ ಔಟ್ ಆಗಿ ಪೆವಿಲಿಯನ್‌ನತ್ತ ತೆರಳಿದರು. ಆಗ ತಂಡ ಸಂಕಷ್ಟಕ್ಕೆ ಸಿಲುಕಿತು ಎಂದು ತುಂಬಾ ಜನ ಅಂದುಕೊಂಡಿದ್ದರು. ಆಗ, ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಜಿತೇಶ್ ಶರ್ಮಾ ಪಂದ್ಯದ ಗತಿಯನ್ನೇ ಜಾದು ಥರ ಬದಲಾಯಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.
ಆರ್‌ಸಿಬಿ ಪರ ಬ್ಯಾಟಿಂಗ್ ಮಾಡಿದ ಫಿಲಿಪ್ ಸಾಲ್ಟ್ 30, ವಿರಾಟ್ ಕೊಹ್ಲಿ 54, ರಜತ್ ಪಾಟಿದಾರ್ 14 ರನ್ ಗಳಿಸಿ ಔಟಾಗಿ ಪೆವಿಲಿಯನ್‌ನತ್ತ ತೆರಳಿದರೆ, ಮಯಾಂಕ್ ಅಗರ್ವಾಲ್ 41, ಜಿತೇಶ್ ಶರ್ಮಾ 85 ರನ್‌ಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸುವ ಮೂಲಜ ನಾಟ್ ಔಟ್ ಆಗಿ ಉಳಿದರು.
ಅದರಲ್ಲೂ ನಾಯಕ ಜಿತೇಶ್ ಶರ್ಮಾ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ 8 ಬೌಂಡರಿ, 6 ಸಿಕ್ಸರ್‌ಗಳನ್ನು ಸಿಡಿಸಿ ಎಲ್‌ಎಸ್‌ಜಿ ಬೌಲರ್‌ಗಳ ಬೆವರಿಳಿಸಿದರು. ಅಲ್ಲದೆ, ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ ಸಹ ಕೊನೆವರ್ಗೂ ಉತ್ತಮ ಸಾಥ್ ನೀಡಿ ಮಿಂಚಿದರು.
ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಗುರುವಾರ (ಮೇ 29) ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲಿವೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಸೋತ ಟೀಂ ಎರಡನೇ ಕ್ವಾಲಿಫೈಯರ್ ಆಡಲಿದೆ. ಇನ್ನುಳಿದಂತೆ ಮೂರು ನಾಲ್ಕನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಎಲಿಮಿನೇಟರ್ ಪಂದ್ಯ ಆಡಲಿವೆ.












Click it and Unblock the Notifications