ಬುಮ್ರಾಗೆ ಸಿಕ್ಸರ್‌ಗಳ ಸುರಿಮಳೆ ಸುರಿಸಿದ ವೈಭವ್ ಸೂರ್ಯವಂಶಿಗೆ ಸಲಾಂ ಎಂದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ
VaiBhav Suryavanshi: 2026ರ ಐಪಿಎಲ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇವರ ಅದ್ಭುತ ಆಟಕ್ಕೆ ಕ್ರಿಕೆಟ್ ದಿಗ್ಗಜರಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ. ಇದೀಗ ದಕ್ಷಿಣ ಆಫ್ರಿಕಾದ ದಂತಕಥೆ ಗ್ರೇಮ್ ಸ್ಮಿತ್ ಅವರು ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಗ್ರೇಮ್ ಸ್ಮಿತ್ ಅವರು ಈ 15 ವರ್ಷದ ಭಾರತೀಯ ಆಟಗಾರನನ್ನು 'ಅಪ್ಪಟ ಸೂಪರ್‌ಸ್ಟಾರ್' ಎಂದು ಬಣ್ಣಿಸಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 27 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವೈಭವ್ ಅವರು ವಿಶ್ವದ ಶ್ರೇಷ್ಠ ಟಿ20 ಬೌಲರ್ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಅವರು ಎಸೆದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದರು. ಅದೇ ಓವರ್‌ನಲ್ಲಿ ಮತ್ತೊಂದು ಸಿಕ್ಸರ್ ಕೂಡ ಬಾರಿಸಿದರು. ಈ ಮೂಲಕ ಅವರು ಕೇವಲ 14 ಎಸೆತಗಳಲ್ಲಿ 39 ರನ್ ಕಲೆಹಾಕಿದರು.

ಗ್ರೇಮ್ ಸ್ಮಿತ್ ಹೇಳಿದ್ದೇನು?
"ನಾನು ನಿರೀಕ್ಷಿಸಿದಂತೆಯೇ ಈ ಬಾರಿಯ ಐಪಿಎಲ್ ಹೆಚ್ಚಿನ ಸ್ಕೋರ್‌ನ ಪಂದ್ಯಗಳೊಂದಿಗೆ ಆರಂಭವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರ ಪ್ರದರ್ಶನವನ್ನು ನೋಡುವುದು ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಆದರೆ, ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರು ಕೂಡ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು," ಎಂದು ಸ್ಮಿತ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
"ವೈಭವ್ ಸೂರ್ಯವಂಶಿ ಅವರು ಮೊದಲ ಎಸೆತದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವ ಸಾಮರ್ಥ್ಯವನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಒಬ್ಬ ಯುವ ಆಟಗಾರನಾಗಿ, ಈ ಟೂರ್ನಿಯ ಉದ್ದಕ್ಕೂ ಅವರು ಒಬ್ಬ ಅಪ್ಪಟ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಬಲ್ಲರು. ಅವರು ಮುಂದೆ ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ," ಎಂದು ತಿಳಿಸಿದ್ದಾರೆ.
ವೈಭವ್ ಧೈರ್ಯಕ್ಕೆ ಕುಂಬ್ಳೆ ಮೆಚ್ಚುಗೆ
2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯನ್ನು ಗೆದ್ದ ಮೊದಲ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದ ಸ್ಮಿತ್, ವಿಶ್ವದ ಅತ್ಯಂತ ಜನಪ್ರಿಯ ಟಿ20 ಟೂರ್ನಿಯಾದ ಐಪಿಎಲ್ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ಹೇಳಿದ್ದಾರೆ. ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೂಡ ವೈಭವ್ ಸೂರ್ಯವಂಶಿ ಅವರ ಧೈರ್ಯಕ್ಕೆ ಮನಸೋತಿದ್ದಾರೆ. ಬುಮ್ರಾ ಅವರಂತಹ ವಿಶ್ವದರ್ಜೆಯ ಬೌಲರ್ ಎದುರಿಸಿದ ಮೊದಲ ಎಸೆತದಲ್ಲೇ ಅತ್ಯಂತ ಆತ್ಮವಿಶ್ವಾಸದಿಂದ ಸಿಕ್ಸರ್ ಸಿಡಿಸಿದ ಈ ಯುವ ಆಟಗಾರನ ಆಟ ಕಂಡು ಕುಂಬ್ಳೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಎಂದರೆ ವಿಶ್ವದ ಯಾವುದೇ ದಿಗ್ಗಜ ಬ್ಯಾಟರ್‌ಗಳು ಕೂಡ ಯೋಚನೆ ಮಾಡಿ ಆಟ ಆಡುತ್ತಾರೆ. ಆದರೆ, 15 ವರ್ಷದ ಯುವ ಆಟಗಾರ ಸೂರ್ಯವಂಶಿ ಆ ಯಾವುದೇ ಒತ್ತಡವಿಲ್ಲದೆ ಬುಮ್ರಾ ಅವರು ಎಸೆದ ಓವರ್‌ನಲ್ಲಿ ಮೊದಲ ಬಾಲ್ ಅನ್ನೇ ಸಿಕ್ಸರ್‌ಗೆ ಅಟ್ಟಿದ್ದಾರೆ. ಅವರ ಧೈರ್ಯವನ್ನು ಮೆಚ್ಚಲೇಬೇಕು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ದಿಟ್ಟ ಪ್ರದರ್ಶನ ನೀಡಿದ ಆಟಗಾರರು ಸಿಗುವುದು ಬಲು ಅಪರೂಪ.












Click it and Unblock the Notifications