USA vs Pak: ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಪಾಕ್ ಬೌಲರ್ ಕಳ್ಳಾಟ? ಗಂಭೀರ ಆರೋಪ
ಟಿ20 ವಿಶ್ವಕಪ್ 2024ರ ಪಂದ್ಯಾವಳಿಯಲ್ಲಿ ಯುಎಸ್‌ಎ ತಂಡ ಬಲಿಷ್ಠ ಪಾಕಿಸ್ತಾನವನ್ನು ಸೋಲಿಸಿ ಆಘಾತ ನೀಡಿದೆ. ಟೈ ಆದ ಪಂದ್ಯವನ್ನು ರೋಚಕ ಸೂಪರ್ ಓವರ್ ನಲ್ಲಿ ಯುಎಸ್‌ಎ ಗೆದ್ದುಕೊಂಡಿತು.
ಪಂದ್ಯ ಸೋಲುವ ಭಯದಲ್ಲಿ ಪಾಕಿಸ್ತಾನ ಕಳ್ಳಾಟ ಆಡಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ಅಂತಾರಾಷ್ಟ್ರೀಯ ಆಟಗಾರರಾಗಿರುವ ಪ್ರಸ್ತುತ ಯುಎಸ್‌ಎ ತಂಡಕ್ಕಾಗಿ ಆಡುತ್ತಿರುವ ವೇಗದ ಬೌಲರ್ ರಸ್ಟಿ ಥರಾನ್, ಪಾಕಿಸ್ತಾನದ ಬೌಲರ್ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.

18 ಟಿ20 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿರುವ ರಸ್ಟಿ ಥರಾನ್, ಹ್ಯಾರಿಸ್ ರೌಫ್ ಪಂದ್ಯದ ಸಮಯದಲ್ಲಿ ಚೆಂಡನ್ನು ತನ್ನ ಹೆಬ್ಬೆರಳಿನ ಉಗುರಿನೊಂದಿಗೆ ವಿರೂಪಗೊಳಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಐಸಿಸಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದು, "ಈ ಹೊಸದಾಗಿ ಬದಲಾದ ಚೆಂಡಿನಿಂದ ಪಾಕಿಸ್ತಾನವು ಚೆಂಡು ವಿರೂಪಗೊಳಿಸಿಲ್ಲ ಎಂದು ನಾವು ನಂಬಬೇಕೆ? 2 ಓವರ್‌ಗಳ ಹಿಂದೆ ಬದಲಾದ ಚೆಂಡನ್ನು ಹಿಂತಿರುಗಿಸುವುದೇ? ಹ್ಯಾರಿಸ್ ರೌಫ್ ತನ್ನ ಹೆಬ್ಬೆರಳಿನ ಉಗುರಿನ ಮೇಲೆ ಚೆಂಡನ್ನು ವಿರೂಪಗೊಳಿಸಿವುದುನ್ನು ನೋಡಬಹುದು" ಎಂದು ಹೇಳಿದ್ದಾರೆ.
ಹ್ಯಾರಿಸ್ ರೌಫ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ, ಮತ್ತು ಟೀಮ್ ಯುಎಸ್ಎ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ, ರಸ್ಟಿ ಥರಾನ್ ಅವರ ಈ ಕಾಮೆಂಟ್‌ಗಳು ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಈಗಾಗಲೇ ವಿವಾದಾತ್ಮಕ ಟಿ 20 ವಿಶ್ವಕಪ್‌ನಲ್ಲಿ ಹೊಸ ವಿವಾದ ಸೃಷ್ಟಿಸಬಹುದು ಎನ್ನಲಾಗಿದೆ.
ಯುಎಸ್‌ಎಗೆ ಐತಿಹಾಸಿಕ ಗೆಲುವು
ಟಾಸ್ ಗೆದ್ದ ಯುಎಸ್‌ಎ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಶದಾಬ್ ಖಾನ್ 25 ಎಸೆತಗಳಲ್ಲಿ 40 ರನ್ ಗಳಿಸಿದರೆ, ಬಾಬರ್ ಅಜಮ್ 43 ಎಸೆತಗಳಲ್ಲಿ 44 ರನ್ ಗಳಿಸಿದರು.
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಯುಎಸ್‌ಎ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಸ್‌ಎ 18 ರನ್ ಗಳಿಸಿತು, ಯುಎಸ್‌ಎ ಬೌಲರ್ ಸೌರಭ್ ನೇತ್ರವಲ್ಕರ್ ಈ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.












Click it and Unblock the Notifications