UAE vs NZ T20: ನ್ಯೂಜಿಲೆಂಡ್ ತಂಡವನ್ನೇ ಬಗ್ಗು ಬಡಿದ ಯುಎಇ : ಕಿವೀಸ್ ವಿರುದ್ಧ ಐತಿಹಾಸಿಕ ಗೆಲುವು
ಕ್ರಿಕೆಟ್ ಶಿಶು ಯುಎಇ ತಂಡ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಶಾಕ್ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದು ಯುಎಇ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಗೆಲುವಾಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಎಇ ಹೊಸ ಇತಿಹಾಸ ಬರೆಯಿತು. ಸರಣಿ ಮೊದಲನೇ ಪಂದ್ಯದಲ್ಲಿ ಗೆಲ್ಲುವ ಅವಕಾಶ ಹೊಂದಿದ್ದ, ಯುಎಇ ಕೊನೆ ಕ್ಷಣದಲ್ಲಿ ಸೋಲನುಭವಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಆ ತಪ್ಪನ್ನು ತಿದ್ದಿಕೊಂಡು ಯಶಸ್ವಿಯಾಗಿ ಗೆಲುವಿನ ದಡ ಸೇರಿತು. ನ್ಯೂಜಿಲೆಂಡ್‌ಗೆ ಟೆಸ್ಟ್ ಆಡದ ತಂಡದ ವಿರುದ್ಧದ ಮೊದಲ ಸೋಲು ಇದಾಗಿದೆ.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಯುಎಇಯ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿತು. ರನ್ ಗಳಿಸಲು ಪರದಾಡಿದ ಕಿವೀಸ್ ಪಡೆ, ಮಾರ್ಕ್ ಚಾಪ್‌ಮನ್ ಅವರ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು.
38 ರನ್ ಗಳಾಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್‌ಗೆ ಮಾರ್ಕ್ ಚಾಪ್‌ಮನ್ ಆಸರೆಯಾದರು. ಜಿಮ್ಮಿ ನೀಶಮ್ 21 ರನ್ ಗಳಿಸಿ ಚಾಪ್‌ಮನ್‌ಗೆ ಸಾಥ್ ನೀಡಿದರು. ಜವಾದುಲ್ಲಾ 2 ವಿಕೆಟ್ ಪಡೆದರೆ, ಆಯನ್ ಖಾನ್ 3 ವಿಕೆಟ್ ಪಡೆದು ನ್ಯೂಜಿಲೆಂಡ್‌ಗೆ ಆಘಾತ ನೀಡಿದರು.
ಮುಹಮ್ಮದ್ ವಸೀಂ ನಾಯಕನ ಆಟ
ಈ ಮೊತ್ತವನ್ನು ಬೆನ್ನತ್ತಿದ ಯುಎಇ ಮೊದಲ ಓವರ್ ನಲ್ಲೇ ಆರ್ಯನ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಆರ್ಯನ್ ಶರ್ಮಾ ಶೂನ್ಯಕ್ಕೆ ಔಟಾದರು.
ನಂತರ ನಾಯಕ ಮುಹಮ್ಮದ್ ವಸೀಂ ಮತ್ತು ವೃತ್ಯ ಅರವಿಂದ್ ತಂಡಕ್ಕೆ ಆಸರೆಯಾದರು. ಅರವಿಂದ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರೆ ವಸೀಂ ಸಿಕ್ಸರ್, ಬೌಂಡರಿಗಳ ಮೂಲಕ ರನ್ ಗಳಿಸಿದರು. 6 ಓವರ್ ಗಳಲ್ಲಿ ಈ ಜೋಡಿ 2ನೇ ವಿಕೆಟ್‌ಗೆ 40 ರನ್ ಕಲೆ ಹಾಕಿತು.
ಅರವಿಂದ್ 25 ರನ್ ಗಳಿಸಿ ಔಟಾದರು. ನಂತರ ಬಂದ ಆಸಿಫ್ ಖಾನ್ ಮತ್ತು ವಸೀಂ ಮೂರನೇ ವಿಕೆಟ್‌ಗೆ 56 ರನ್ ಕಲೆಹಾಕಿದರು. ಮುಹಮ್ಮದ್ ವಸೀಮ್ 29 ಎಸೆತಗಳಲ್ಲಿ 4 ಬೌಂಡರಿ ಮೂರು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರೆ, ಆಸಿಫ್ ಖಾನ್ 29 ಎಸೆತಗಳಲ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 48 ರನ್ ಗಳಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.












Click it and Unblock the Notifications