U19 World Cup: ಸಚಿನ್ ಭರ್ಜರಿ ಶತಕ; ನೇಪಾಳ ವಿರುದ್ಧ ಗೆದ್ದ ಭಾರತ
ಶುಕ್ರವಾರ ನಡೆದ ಅಂಡರ್ 19 ಏಕದಿನ ವಿಶ್ವಕಪ್‌ನ ಸೂಪರ್ ಸಿಕ್ಸ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ 11ನೇ ಸೆಮಿಫೈನಲ್ ಪ್ರವೇಶಿಸಿದೆ. ನೇಪಾಳ ವಿರುದ್ಧ ಭಾರತ ಸೂಪರ್ ಸಿಕ್ಸ್ ಪಂದ್ಯದಲ್ಲಿ 132 ರನ್‌ಗಳಿಂದ ಗೆಲುವು ಸಾಧಿಸಿತು.
ಬ್ಲೋಯೆಮ್‌ಫಾಂಟೆನ್‌ನ ಮಂಗಾಂಗ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲಿ ಭಾರತ ವಿಕೆಟ್ ಕಳೆದುಕೊಂಡರೂ ಆ ಬಳಿಕ ಚೇತರಿಸಿಕೊಂಡಿತು.

ಆದರ್ಶ್ ಸಿಂಗ್ 21 ರನ್ ಗಳಿಸಿದರೆ, ಆರ್ಶಿನ್ ಕುಲಕರ್ಣಿ 18 ರನ್ ಗಳಿಸಿ ಔಟಾದರು. ಪ್ರಿಯಾಂಶು ಮೊಳಿಯಾ 19 ರನ್ ಗಳಿಸಿದರು. 61 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ನಾಯಕ ಉದಯ್ ಸಹರನ್ ಮತ್ತು ಸಚಿನ್ ದಾಸ್ ಅತ್ಯುತ್ತಮ ಜೊತೆಯಾಟದ ಮೂಲಕ ಭಾರತ ದೊಡ್ಡ ಮೊತ್ತ ಗಳಿಸಲು ನೆರವಾದರು.
ಉದಯ್ ಸಹರನ್ 107 ಎಸೆತಗಳಲ್ಲಿ 9 ಬೌಂಡರಿ ಸಹಿತ 100 ರನ್ ಗಳಿಸಿದರೆ, ಸಚಿನ್ ದಾಸ್ 101 ಎಸೆತಗಳಲ್ಲಿ 11 ಬೌಂಡರಿ 3 ಸಿಕ್ಸರ್ ಸಹಿತ 116 ರನ್ ಗಳಿಸಿದರು. ಇವರಿಬ್ಬರ ಅದ್ಭುತ ಜೊತೆಯಾಟದ ನೆರವನಿಂದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು.
ಭಾರತದ ಬಿಗಿ ಬೌಲಿಂಗ್ ದಾಳಿ
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ನೇಪಾಳ ಭಾರತದ ಬಿಗಿಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿತು. 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಮಾತ್ರ ಗಳಿಸಿದ ನೇಪಾಳ 132 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಯಾವುದೇ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಬೌಲಿಂಗ್ ಮಾಡಿದ ಭಾರತೀಯ ಬೌಲರ್‌ಗಳು ತಮ್ಮ ಲೈನ್ ಮತ್ತು ಲೆಂಗ್ತ್ ಅನ್ನು ಕಾಯ್ದುಕೊಂಡರು, ನೇಪಾಳ ಬ್ಯಾಟರ್‌ಗಳಿಗೆ ಯಾವ ಅವಕಾಶವನ್ನು ನೀಡಲಿಲ್ಲ. ನೇಪಾಳದ ಯಾವುದೇ ಬ್ಯಾಟರ್ 50 ರನ್ ದಾಟಲು ಸಾಧ್ಯವಾಗಲಿಲ್ಲ. ಎಡಗೈ ಆರ್ಥೊಡಾಕ್ಸ್ ಸೌಮಿ ಕುಮಾರ್ ಪಾಂಡೆ ಮಾರಕ ಬೌಲಿಂಗ್ ಮಾಡಿದರು. 10 ಓವರ್ ಗಳಲ್ಲಿ 29 ರನ್ ಬಿಟ್ಟಕೊಟ್ಟ ಅವರು 4 ವಿಕೆಟ್ ಪಡೆದುಕೊಂಡರು.
ಅರ್ಶಿನ್ ಕುಲಕರ್ಣಿ 2 ವಿಕೆಟ್ ಪಡೆದರೆ, ರಾಜ್ ಲಂಬಾಣಿ, ಆರಾಧ್ಯ ಶುಕ್ಲಾ ಮತ್ತು ಮುರುಗನ್ ಅಭಿಷೇಕ್ ತಲಾ ಒಂದು ವಿಕೆಟ್ ಪಡೆದರು. ಸೆಮಿಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.












Click it and Unblock the Notifications