Sri Lanka vs Afghanistan: ಒಂದೇ ಓವರ್ನಲ್ಲಿ 39 ರನ್; 36 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಶ್ರೀಲಂಕಾ ಬ್ಯಾಟರ್
ಉದಯ್‌ಪುರದ ಮೀರಜ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಲೆಜೆಂಡ್ಸ್ ಲೀಗ್ 2025ರ ಎಲಿಮಿನೇಟರ್ ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟರ್ ತಿಸಾರ ಪೆರೇರಾ ಅಬ್ಬರಿಸಿದರು. 36 ಎಸೆತಗಳಲ್ಲಿ ಬರೋಬ್ಬರಿ 108 ಗಳಿಸಿದ್ದಲ್ಲದೆ, ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದರು.
ರಾಷ್ಟ್ರೀಯ ತಂಡಗಳಿಗೆ ಆಡಿ ನಿವೃತ್ತಿ ಹೊಂದಿರುವ ಆಟಗಾರರು ಮತ್ತೊಮ್ಮೆ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ಅಫ್ಘಾನಿಸ್ತಾನ ಲೆಜೆಂಡ್ಸ್ ವಿರುದ್ಧ 26 ರನ್‌ಗಳ ಗೆಲುವು ಸಾಧಿಸಿತು. ತಿಸಾರಾ ಪೆರೇರಾ ಅಬ್ಬರದ ಶತಕದ ನೆರವಿನಿಂದ ಶ್ರೀಲಂಕಾ 230 ರನ್ ಕಲೆಹಾಕಿದರೆ, ಅಫ್ಘಾನಿಸ್ತಾನ 204 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ಲಿಯೋ ಫ್ರಾನ್ಸಿಸ್ಕೊ 2 ರನ್ ಗಳಿಸಿದರೆ, ದಿಲ್ಷಾನ್ 8 ರನ್ ಗಳಿಸಿ ಔಟಾದರು. ಮೆವಾನ್ ಫೆರ್ನಾಂಡೋ 56 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 81 ರನ್ ಗಳಿಸಿದರು, ಲಸಿತ್ ಲಕ್ಷಣ್ 15 ಎಸೆತಗಳಲ್ಲಿ 19 ರನ್ ಗಳಿಸಿದರು. ತಿಸಾರ ಪೆರೇರಾ ಕೇವಲ 36 ಎಸೆತಗಳಲ್ಲಿ 2 ಬೌಂಡರಿ 13 ಸಿಕ್ಸರ್ ಸಹಿತ ಅಜೇಯ 108 ರನ್ ಗಳಿಸಿ ಅಬ್ಬರಿಸಿದರು.
ಕೊನೆಯ ಓವರ್ ನಲ್ಲಿ 39 ರನ್
ಕೊನೆಯ ಓವರ್ ನಲ್ಲಿ ತಿಸಾರ ಪೆರೇರಾ ಅಬ್ಬರಕ್ಕೆ ಅಫ್ಘಾನಿಸ್ತಾನ ದಂಗಾಯಿತು. ಕೊನೆಯ ಓವರ್ ನ ಆರೂ ಎಸೆತಗಳನ್ನು ಸಿಕ್ಸರ್ ಬಾರಿಸಿದ ಪೆರೇರಾ ಶತಕ ಪೂರೈಸಿದರು. ಜೊತೆಗೆ ಅಫ್ಘಾನಿಸ್ತಾನ ಬೌಲರ್ ಮೂರು ವೈಡ್ ಬಾಲ್ ಎಸೆಯುವ ಮೂಲಕ ಕೊನೆಯ ಓವರ್ ನಲ್ಲಿ ಶ್ರೀಲಂಕಾ ಬರೋಬ್ಬರಿ 39 ರನ್ ಗಳಿಸಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಮಾತ್ರ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಅಸ್ಘರ್ ಅಫ್ಘಾನ್ 31 ಎಸೆತಗಳಲ್ಲಿ 70 ರನ್ ಗಳಿಸಿದರೆ, ಅಯಾನ್ ಖಾನ್ 38 ಎಸೆತಗಳಲ್ಲಿ 52 ರನ್ ಗಳಿಸಿದರು, ಉಳಿದ ಯಾವ ಬ್ಯಾಟರ್ ಕೂಡ ಹೋರಾಟ ಕೊಡಲಿಲ್ಲ.
ಈ ಗೆಲುವಿನ ಮೂಲಕ ಶ್ರೀಲಂಕಾ ಕ್ವಾಲಿಫೈಯರ್ 2 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಸೋಮವಾರ ಮಾರ್ಚ್ 17ರಂದು ಇಂಡಿಯಾ ಲೆಜೆಂಡ್ಸ್ ಮತ್ತು ಏಷ್ಯನ್ ಸ್ಟಾರ್ಸ್ ಕ್ವಾಲಿಫೈಯರ್ 2 ಪಂದ್ಯ ಆಡಲಿದ್ದು, ಇಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ದು, ಸೋಲುವ ತಂಡ ಕ್ವಾಲಿಫೈಯರ್ 2 ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.












Click it and Unblock the Notifications