RCB: ಆರ್‌ಸಿಬಿಗೆ ಬಲ ತುಂಬಲಿರುವ ಕನ್ನಡಿಗರು; ಈ ಸ್ಫೋಟಕ ಬ್ಯಾಟರ್ ಮೇಲೆ ಕಣ್ಣು!
ಐಪಿಎಲ್ 2025ರ ಮೆಗಾಹರಾಜಿಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಬೇಸರದ ಸಂಗತಿಯೆಂದರೆ 10 ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಕನ್ನಡಿಗ ಕ್ರಿಕೆಟರು ಒಬ್ಬರೂ ಇಲ್ಲ. ಈಗ ರೀಟೇನ್ ಆಗದೇ ಇದ್ದರೂ, ಮೆಗಾಹರಾಜಿನಲ್ಲಿ ಕರ್ನಾಟಕದ ಕ್ರಿಕೆಟಿಗರು ಹೆಸರು ನೊಂದಾಯಿಸಿಕೊಳ್ಳಲಿದ್ದು ವಿವಿಧ ಫ್ರಾಂಚೈಸಿಗಳ ಪಾಲಾಗುವ ಸಾಧ್ಯತೆ ಇದೆ.
ಕರ್ನಾಟಕ ಕ್ರಿಕೆಟಿಗರಿಗೆ ಹೆಚ್ಚು ಅವಕಾಶ ಕೊಡಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮೊದಲಿನಿಂದಲೂ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಬಾರಿ ಆರ್ ಸಿಬಿ ತಂಡಕ್ಕೆ ಅತ್ಯುತ್ತಮ ಅವಕಾಶ ಸಿಕ್ಕಿದ್ದು, ಸ್ಥಳೀಯ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಹಲವು ಕರ್ನಾಟಕದ ಆಟಗಾರರು ಈ ಬಾರಿ ಆರ್ ಸಿಬಿ ತಂಡವನ್ನು ಸೇರುವ ಸಾಧ್ಯತೆ ಇದೆ. ಕನ್ನಡಿಗರು ಎನ್ನುವ ಕಾರಣಕ್ಕಲ್ಲದೇ ಇದ್ದರೂ, ಪ್ರತಿಭಾವಂತರಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಸ್ಥಳೀಯ ಆಟಗಾರರಿಗೆ ಇರುವ ಅನುಭವವನ್ನು ಪರಿಗಣಿಸಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಹಾಗಾದರೆ ಯಾರೆಲ್ಲಾ ಆರ್ ಸಿಬಿ ಸೇರುವ ಅವಕಾಶವಿದೆ ತಿಳಿಯಿರಿ.
ಕೆಎಲ್ ರಾಹುಲ್
ಕೆಎಲ್ ರಾಹುಲ್‌ರನ್ನು ಲಕ್ನೋ ಸೂಪರ್ ಜೈಂಟ್ಸ್ ಬಿಡುಗಡೆ ಮಾಡಿದ್ದು ಅವರು ಮೆಗಾ ಹರಾಜಿಗೆ ಬರುವುದು ಖಚಿತವಾಗಿದೆ. ಮಾಜಿ ಆರ್ ಸಿಬಿ ಆಟಗಾರನಾಗಿರುವ ಕೆಎಲ್ ರಾಹುಲ್ ಕೂಡ ಆರ್ ಸಿಬಿಗೆ ಬರಲು ಉತ್ಸಾಹ ತೋರಿಸಿದ್ದಾರೆ. ನಾಯಕ, ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು ಅವರನ್ನು ಆರ್ ಸಿಬಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ಅಭಿನವ್ ಮನೋಹರ್
ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡಿರುವ ಕನ್ನಡಿಗ ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು. ಐಪಿಎಲ್‌ನಲ್ಲಿ ಮಾತ್ರವಲ್ಲ, ದೇಶೀಯ ಟೂರ್ನಿಯಲ್ಲಿ, ಮಹಾರಾಜ ಕಪ್‌ನಲ್ಲಿ ಅವರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅಭಿನವ್ ಮನೋಹರ್ ಆರ್ ಸಿಬಿ ಬ್ಯಾಟಿಂಗ್‌ಗೆ ಬಲ ತುಂಬುವಲ್ಲಿ ಯಾವುದೇ ಸಂದೇಹವಿಲ್ಲ. ಬೆಂಗಳೂರು ಪಿಚ್‌ನಲ್ಲಿ ಆಡಿರುವ ಅಪಾರ ಅನುಭವ ಕೂಡ ಇದ್ದು, ಹರಾಜಿನಲ್ಲಿ ಆರ್ ಸಿಬಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು.
ವಿಜಯ್‌ಕುಮಾರ್ ವೈಶಾಖ್
ಆರ್ ಸಿಬಿ ತಂಡದ ನೆಟ್ ಬೌಲರ್ ಆಗಿದ್ದ ವೈಶಾಖ್ ಬಳಿಕ ತಂಡವನ್ನು ಸೇರಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್ ಟಿಎಂ ಬಳಸಿಕೊಂಡು ಅವರನ್ನು ಆರ್ ಸಿಬಿ ವಾಪಸ್ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.
ವಿದ್ವತ್ ಕಾವೇರಪ್ಪ
ವಿದ್ವತ್ ಕಾವೇರಪ್ಪ ವೇಗದ ಬೌಲರ್ ಆಗಿದ್ದು, 2024ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದಾರೆ. ಎತ್ತರದ ಬೌಲರ್ ಆಗಿದ್ದು, ಭಾರತೀಯ ವೇಗಿಯಾಗಿರುವ ಕಾರಣ, ಅವರು ಕೂಡ ಆರ್ ಸಿಬಿ ಬೌಲಿಂಗ್ ವಿಭಾಗಕ್ಕೆ ಬಲ ತುಂಬಬಹುದು. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆರ್ ಸಿಬಿ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ವಿದ್ವತ್ ಕಾವೇರಪ್ಪರನ್ನು ಖರಿದಿ ಮಾಡಲು ಪ್ರಯತ್ನಿಸಬಹುದು.
ಇದರ ಜೊತೆ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ನಿಖಿನ್ ಜೋಸ್, ಎಲ್ ಆರ್ ಚೇತನ್ ಸೇರಿದಂತೆ ಹಲವು ಪ್ರತಿಭಾವಂತ ಕ್ರಿಕೆಟಿಗರು ಇದ್ದು ಆರ್ ಸಿಬಿ ಯಾರಿಗೆ ಮಣೆ ಹಾಕುತ್ತದೆ ನೋಡಬೇಕಿದೆ.












Click it and Unblock the Notifications