ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿ ಯುಎಇಗೆ ಸ್ಥಳಾಂತರ: ಸೌರವ್ ಗಂಗೂಲಿ
ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಮಾಹಿತಿ ನೀಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಿಂದ ಏಷ್ಯಾಕಪ್ ಟೂರ್ನಿ ಯುಎಇಗೆ ಸ್ಥಳಾಂತರಗೊಳ್ಳುತ್ತದೆ ಎಂದು ಕಳೆದ ಹಲವು ದಿನಗಳಿಂದ ಊಹಾಪೋಹಗಳು ಕೇಳಿಬಂದಿದ್ದವು. ಈಗ ಅದು ನಿಜವಾಗಿದ್ದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಏಷ್ಯಾಕಪ್ ನಿಗದಿತ ವೇಳಾಪಟ್ಟಿಯಂತೆ ಯುಎಇನಲ್ಲಿ ನಡೆಯಲಿದೆ. ಇದು ಮಳೆ ಬೀಳದ ಏಕೈಕ ಸ್ಥಳವಾಗಿದೆ ಎಂದು" ತಿಳಿಸಿದರು. ಕೊರೊನಾ ವೇಳೆ ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಯುಎಇಗೆ ಸ್ಥಳಾಂತರವಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.
ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಬುಧವಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ತಿಳಿಸಿದ್ದು, ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಕಾರಣ ಮುಂಬರುವ ಏಷ್ಯಾ ಕಪ್ ಟಿ 20 ಆವೃತ್ತಿಯ ಆತಿಥ್ಯ ವಹಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ತಂಡ ನಿಗದಿಯಂತೆ ಟೂರ್ನಿಯಲ್ಲಿ ಭಾಗವಹಿಸಲಿದೆ.

ಲಂಕಾ ಪ್ರೀಮಿಯರ್ ಲೀಗ್ ರದ್ದುಪಡಿಸಿದ್ದ ಶ್ರೀಲಂಕಾ ಕ್ರಿಕೆಟ್
ದೇಶದಲ್ಲಿ ಪ್ರತಿಭಟನೆ ತೀವ್ರವಾಗುವ ಮೊದಲು ಶ್ರೀಲಂಕಾ ಬಿಕ್ಕಟ್ಟಿನ ನಡುವೆಯೂ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಯಶಸ್ವಿಯಾಗಿ ಪೂರೈಸಿತ್ತು. ಬಿಕ್ಕಟ್ಟಿನ ನಡುವೆಯೂ ಶ್ರೀಲಂಕಾ ಕ್ರಿಕೆಟ್ ಪ್ರೇಮಿಗಳು ತಮ್ಮ ದೇಶವನ್ನು ಹುರಿದುಂಬಿಸಿದ್ದರು. ಆದರೆ ಪ್ರತಿಭಟನೆ ತೀವ್ರವಾಗಿ ಪರಿಸ್ಥಿತಿ ಕೈಮೀರಿದ್ದು, ಶ್ರೀಲಂಕಾ ಸುಧಾರಣೆ ಕಾಣಲು ಸಾಕಷ್ಟು ಸಮಯ ಹಿಡಿಯಲಿದೆ. ಅದರಲ್ಲೂ ಪ್ರತಿಭಟನೆಗಳು ಯಾವಾಗ ಬೇಕಾದರೂ ತೀವ್ರವಾಗುವ ಸಾಧ್ಯತೆ ಇರುವ ಕಾರಣ ಆಟಗಾರರ ಭದ್ರತೆ, ಆರ್ಥಿಕ ಹೊರೆಯ ಕಾರಣದಿಂದ ಶ್ರೀಲಂಕಾ ಏಷ್ಯಾ ಕಪ್ ಆಯೋಜನೆಯಿಂದ ಹಿಂದೆ ಸರಿದಿದೆ.
ದೇಶದ ಆರ್ಥಿಕ, ರಾಜಕೀಯ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾ ಕ್ರಿಕೆಟ್ ಇತ್ತೀಚೆಗೆ ಲಂಕಾ ಪ್ರೀಮಿಯರ್ ಲೀಗ್ (LPL) ನ ಮೂರನೇ ಆವೃತ್ತಿಯನ್ನು ಮುಂದೂಡಿತ್ತು. ಈಗ ಏಷ್ಯಾ ಕಪ್ ಟೂರ್ನಿ ಆಯೋಜನೆಯ ಹೊಣೆಯಿಂದ ತಪ್ಪಿಸಿಕೊಂಡಿದೆ. ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಈ ಮೊದಲು ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯುತ್ತಿತ್ತು ಇನ್ನು ಮುಂದೆ ಟಿ20 ಮಾದರಿಯಲ್ಲಿ ನಡೆಯಲಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಏಷ್ಯಾಕಪ್‌ನಲ್ಲಿ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಐದೂ ತಂಡಗಳು ಬಲಿಷ್ಠವಾಗಿರುವುದರಿಂದ ಪ್ರಶಸ್ತಿಗಾಗಿ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications