Ind vs Aus: ಮತ್ತೆ ಕೈಕೊಟ್ಟ ಬ್ಯಾಟರ್‌ಗಳು; ಸಂಕಷ್ಟದಲ್ಲಿ ಭಾರತ
ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಪಂದ್ಯದ ಎರಡನೇ ದಿನದಾಟ ಮುಕ್ತಾಯವಾಗಿದ್ದು ಭಾರತ ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದು, ಇನ್ನೂ 310 ರನ್‌ಗಳ ಹಿನ್ನಡೆಯಲ್ಲಿದ್ದು ಫಾಲೋಆನ್ ಭೀತಿಯಲ್ಲಿದೆ.
ಮೊದಲ ದಿನ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದ ಆಸ್ಟ್ರೇಲಿಯಾ ಎರಡನೇ ದಿನ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಎರಡನೇ ದಿನ 163 ರನ್ ಕಲೆಹಾಕುವಷ್ಟರಲ್ಲಿ ಆಲೌಟ್ ಆದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು. ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಪಡೆದುಕೊಂಡರು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ನಾಯಕ ರೋಹಿತ್ ಶರ್ಮಾ 3 ರನ್ ಗಳಿಸಿದ್ದಾಗ ಔಟ್ ಆಗುವ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ 24 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು, ಕಮ್ಮಿನ್ಸ್ ಎಸೆತದಲ್ಲಿ ಬೌಲ್ಡ್ ಆದರು.
ಬಳಿಕ ಬಂದ ವಿರಾಟ್ ಕೊಹ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. 86 ಎಸೆತಗಳಲ್ಲಿ 36 ರನ್ ಗಳಿಸಿದ ಕೊಹ್ಲಿ ಔಟಾದರು. ಇದಕ್ಕೂ ಮೊದಲು 82 ರನ್ ಗಳಿಸಿ ಶತಕದತ್ತ ಹೋಗುತ್ತಿದ್ದ ಜೈಸ್ವಾಲ್ ರನ್‌ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಇನ್ನಿಂಗ್ಸ್ ಕೊನೆಯಲ್ಲಿ ನೈಟ್ ವಾಚ್‌ಮನ್ ರೀತಿ ಬಂದ ಆಕಾಶ್ ದೀಪ್ 13 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟಾದರು. ಪಾಟ್ ಕಮ್ಮಿನ್ಸ್ ಮತ್ತು ಸ್ಕಾಟ್ ಬೊಲ್ಯಾಂಡ್ ತಲಾ 2 ವಿಕೆಟ್ ಪಡೆದುಕೊಂಡರು.
ರಿಷಬ್ ಪಂತ್ ಅಜೇಯ 6 ರನ್ ಗಳಿಸಿದ್ದರೆ, ರವೀಂದ್ರ ಜಡೇಜಾ ಅಜೇಯ 4 ರನ್ ಗಳಿಸಿ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಇವರಿಬ್ಬರ ಮೇಲೆ ಭಾರತ ಅವಲಂಬನೆಯಾಗಿದ್ದು ದೊಡ್ಡ ಜೊತೆಯಾಟ ಬಂದರೆ ಮಾತ್ರ ಭಾರತ ಫಾಲೋಆನ್ ಭೀತಿಯನ್ನು ತಪ್ಪಿಸಿಕೊಳ್ಳಬಹುದು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಮುಖ್ಯವಾಗಿದೆ. ಒಂದು ವೇಳೆ ಭಾರತ ಸೋತರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಹಾದಿ ತುಂಬಾ ಕಷ್ಟವಾಗಲಿದೆ. ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತಕ್ಕೆ ಇದನ್ನೂ ಸೇರಿ ಇನ್ನೆರಡು ಟೆಸ್ಟ್ ಪಂದ್ಯಗಳು ಮಾತ್ರ ಉಳಿದಿವೆ.












Click it and Unblock the Notifications