Team India Head Coach: ಗೌತಮ್ ಗಂಭೀರ್ ಐದು ಬೇಡಿಕೆ ಒಪ್ಪಿಕೊಂಡ ಬಿಸಿಸಿಐ?
ಟೀಮ್ ಇಂಡಿಯಾದ ಕೋಚ್ ಆಗಿ ಯಾರು ನೇಮಕ ಆಗುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗುತ್ತಲೇ ಇವೆ. ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದ ಪ್ರಸಕ್ತ ಟಿ20 ವಿಶ್ವಕಪ್ ಬಳಿಕ ಕೊನೆ ಗೊಳ್ಳಲಿದೆ. ಹೀಗಾಗಿ ಇವರ ಸ್ಥಾನ ತುಂಬುವವರು ಯಾರು ಎಂಬ ಚರ್ಚೆ ಆರಂಭವಾಗಿದೆ. ಈ ಲೀಸ್ಟ್‌ನಲ್ಲಿ ಮುಂಚೂಣಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರನ ಹೆಸರು ಕೇಳಿ ಬರುತ್ತಿದೆ.
ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಶೀಘ್ರದಲ್ಲೇ ನೂತನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಗೌತಮ್ ಗಂಭೀರ್ ಅವರು ಬಿಸಿಸಿಐಗೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಬಹುಶಃ ಬಿಸಿಸಿಐ ಈಗ ಗೌತಮ್ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಗೌತಮ್ ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಕೋಚ್ ಸ್ಥಾನ ಅಲಂಕರಿಸಬಹುದು.

ಕೆಕೆಆರ್ ಚಾಂಪಿಯನ್
ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್‌ನಲ್ಲಿ ಚಾಂಪಿಯನ್ ಆದ ಬಳಿಕ, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಕೋಚ್ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿತ್ತು. ಗೌತಮ್ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಸ್ಥಾನದ ಮೇಲೆ ದೇಶೀಯ ಹಾಗೂ ವಿದೇಶಿ ಆಟಗಾರರು ಕಣ್ಣು ನೆಟ್ಟಿದ್ದಾರೆ.
ಗೌತಮ್ ಗಂಭೀರ್ ಇಟ್ಟ ಬೇಡಿಕೆ ಏನು?
ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್, ಕೋಚಿಂಗ್ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ಲಖ್ನೋ ಸೂಪರ್ ಜೈಂಟ್ಸ್ ಹಾಗೂ ಕೆಕೆಆರ್ ತಂಡದ ಕೋಚ್ ಆಗಿ ಕೆಲಸ ಮಾಡಿದ ಅನುಭವ ಇದೆ. ಟೀಮ್ ಇಂಡಿಯಾಕ್ಕೆ ಚಾಂಪಿಯನ್ ಪಟ್ಟವನ್ನು ಕಟ್ಟುವ ದೃಷ್ಟಿಯನ್ನು ಗೌತಮ್ ಹೊಂದಿದ್ದು, ಇದಕ್ಕಾಗಿ ತಂಡದಲ್ಲಿ ಹಲವು ಬದಲಾವಣೆಗಳನ್ನು ತರುವ ಸಾಧ್ಯತೆ ಇದೆ. ಇವರು ಮುಖ್ಯ ಕೋಚ್ ಆದ ನಂತರ ಟೀಂ ಇಂಡಿಯಾದ ಮೇಲೆ ಸಂಪೂರ್ಣ ಹಿಡಿತ ಬೇಕು ಎಂಬುದು ಗೌತಮ್ ಅವರ ಮೊದಲ ಷರತ್ತು ಎನ್ನಲಾಗುತ್ತಿದೆ.

ಯಾವ ಆಟಗಾರರಿಗೆ ಕಾದಿದೆ ಕಂಟಕ
ನಾಯಕ ತಂಡದ ಆಯ್ಕೆಯಲ್ಲಿ ತಲೆ ಹಾಕಬಾರದು ಎಂಬುದು ಅವರ ಎರಡನೇ ಷರತ್ತು ಎಂದು ಹೇಳಲಾಗುತ್ತಿದೆ. ಅಲ್ಲದೆ ಭವಿಷ್ಯದ ತಂಡವನ್ನು ಕಟ್ಟುವ ಆಸೆಯನ್ನು ಗೌತಮ್ ಗಂಭೀರ್ ಹೊಂದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂಬುದು ಗಂಭಿರ್ ಅವರ ವಾದವಾಗಿದೆ. ಇನ್ನು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಿರಿಯ ಆಟಗಾರರಿಗೆ ಕೊನೆಯ ಅವಕಾಶ ಆಗಿರುತ್ತದೆ. ಅಲ್ಲಿ ಹಿರಿಯ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂಬುದು ಗಂಭೀರ್ ಅನಿಸಿಕೆ ಎಂದು ಗೊತ್ತಾಗಿದೆ.
ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಟೆಸ್ಟ್‌ಗೆ ಬೇರೆ ತಂಡ ಎಂಬ ಕೂಗಿಗೆ ಗೌತಮ್ ಗಂಭೀರ್ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಇನ್ನು 2027ರ ಏಕದಿನ ವಿಶ್ವಕಪ್‌ಗೆ ಗೌತಮ್ ತಮ್ಮದೇ ಆದ ಬ್ಲ್ಯೂ ಪ್ರಿಂಟ್ ಹೊಂದಿದ್ದಾರೆ. ಅದರ ಅಡಿಯಲ್ಲಿ ಕಾರ್ಯಗಳನ್ನು ಮಾಡಲಾಗುತ್ತದೆ. ಇನ್ನು ಗೌತಮ್ ಗಂಭೀರ್ ಹಿರಿಯ ಆಟಗಾರರು ಟಿ20 ಕ್ರಿಕೆಟ್‌ನಿಂದ ದೂರ ಉಳಿದರೆ ಉತ್ತಮ ಎಂಬ ಮಾತುಗಳನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications