ರಿಷಬ್, ಪಾಂಡ್ಯ ಭರ್ಜರಿ ಆಟ: ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

ಐತಿಹಾಸಿಕ ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಕೊನೆಗೊಂಡಿದೆ. ಟೆಸ್ಟ್‌ ಸರಣಿಯನ್ನು ಗೆದ್ದು ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕೈಚೆಲ್ಲಿದ ಟೀಂ ಇಂಡಿಯಾ ಟಿ20 ಮತ್ತು ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಎರಡೂ ಮಾದರಿಯಲ್ಲಿ ಸರಣಿಯನ್ನು ಗೆದ್ದುಕೊಂಡಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಸರಣಿ ಮೂಲಕ ದಾಖಲೆ ಬರೆದಿದ್ದಾರೆ. ಮಹಮ್ಮದ್ ಅಜರುದ್ದೀನ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮಾತ್ರ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಿತ್ತು.

ಓವಲ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸರಣಿಯ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಆತಿಥೇಯ ಇಂಗ್ಲೆಂಡ್ ತಂಡ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 100 ರನ್‌ಗಳ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು, ಕೊನೆಯ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು.

ಜುಲೈ 17 ರಂದು ನಡೆದ ಏಕದಿನ ಸರಣಿಯ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ರಿಷಬ್ ಪಂತ್ ಅಮೋಘ ಶತಕದ ನೆರವಿನಿಂದ ಭಾರತ ತಂಡ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ರಿಷಬ್ ಪಂತ್ ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದರು.

 ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ

ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಆಧಾರ, ರನ್ ಮೆಷಿನ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ವಿರಾಟ್ ಕೊಹ್ಲಿ ಸತತವಾಗಿ ವಿಫಲವಾಗುತ್ತಿರುವುದು ಭಾರತದ ಕ್ರಿಕೆಟ್ ವಲಯದಲ್ಲಿ ಚಿಂತೆಗೆ ಕಾರಣವಾಗಿದೆ. ಟಿ20 ವಿಶ್ವಕಪ್ ಸರಣಿ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅವರಿಂದ ಉತ್ತಮ ಪ್ರದರ್ಶನ ಬರಬೇಕಿದೆ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ವಿಫಲರಾದ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಏಕದಿನ ಪಂದ್ಯ ಸಹಕಾರಿ ಎಂದೇ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಇಡೀ ಪ್ರವಾಸದಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸದೆ ನಿರಾಸೆ ಮೂಡಿಸಿದರು. ಅವರು ಇಡೀ ಪ್ರವಾಸದಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಲು ಸಾಧ್ಯವಾಗಲಿಲ್ಲ.ಆಡಿದ ಎರಡು ಏಕದಿನ ಪಂದ್ಯಗಳಲ್ಲಿ ಕೇವಲ 16 ಮತ್ತು 17 ರನ್ ಗಳಿಸಿದರು. ವಿರಾಟ್ ಕೊಹ್ಲಿ 50-ಓವರ್‌ಗಳ ಪಂದ್ಯದಲ್ಲಿ ಐದು ಬಾರಿ 20 ಕ್ಕಿಂತ ಕಡಿಮೆ ರನ್ ಗಳಿಸಿರುವುದು ಇದೇ ಮೊದಲಬಾರಿಗೆ.

 ಭಾರತದ ಬ್ಯಾಟರ್ ಗಳಿಗೆ ಎಡಗೈ ವೇಗಿಗಳ ತೊಂದರೆ

ಭಾರತದ ಬ್ಯಾಟರ್ ಗಳಿಗೆ ಎಡಗೈ ವೇಗಿಗಳ ತೊಂದರೆ

ಇತ್ತೀಚಿನ ದಿನಗಳಲ್ಲಿ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಭಾರತ ಸೋಲಲು ಎಡಗೈ ವೇಗದ ಬೌಲರ್ ಗಳು ಕಾರಣವಾಗಿದ್ದಾರೆ. ಎಡಗೈ ವೇಗದ ಬೌಲರ್ ಗಳನ್ನು ಎದುರಿಸುವಲ್ಲಿ ಭಾರತ ತಂಡದ ಅಗ್ರ ಬ್ಯಾಟರ್ ಗಳು ವೈಫಲ್ಯ ಕಂಡಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ವಿಶ್ವಕಪ್ ಸೆಮಿಫೈನಲ್ ಅಥವಾ ಪಾಕಿಸ್ತಾನದ ವಿರುದ್ಧ 2021ರ T20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತ ಸೋಲಲು ಕಾರಣ ಎಡಗೈ ವೇಗದ ಬೌಲರ್‌ಗಳು.

ಪಾಕಿಸ್ತಾನದ ಮೊಹಮ್ಮದ್ ಅಮೀರ್ (2017), ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ (2019), ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ (2021) ಟೀಮ್ ಇಂಡಿಯಾವನ್ನು ಕಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯ ಎರಡನೇ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ವೇಗಿ ರೀಸ್ ಟೋಪ್ಲೆ ಭಾರತದ ಅಗ್ರ ಆಟಗಾರರ ವಿಕೆಟ್ ಪಡೆದರು. ಭಾರತ ಕ್ರಿಕೆಟಿಗರು ಟಿ20 ವಿಶ್ವಕಪ್‌ಗೂ ಮುನ್ನ ಈ ಸಮಸ್ಯೆ ಸರಿಪಡಿಸಿಕೊಳ್ಳಬೇಕಿದೆ.

 ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ

ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ

ಒಂದು ಕಾಲದಲ್ಲಿ ಭಾರತದ ಆರಂಭಿಕ ಬ್ಯಾಟರ್ ಗಳ ಮೇಲೆ ತಂಡ ಅವಲಂಬಿತವಾಗಿತ್ತು. ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಅವರ ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನ ಭಾರತದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ನೀಡಿರಲಿಲ್ಲ. ಆದರೆ ಪ್ರಸ್ತುತ ರೋಹಿತ್ ಶರ್ಮಾ, ವಿರಾಟ್, ಧವನ್ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಇದನ್ನೇ ಸವಾಲಾಗಿ ಸ್ವೀಕರಿಸಿರುವ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿ ಅರಿತು ಆಟವಾಡುತ್ತಿರುವುದು ಭಾರತ ತಂಡಕ್ಕೆ ವರದಾನವಾಗಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಗಿದ ಹಾರ್ದಿಕ ಪಾಂಡ್ಯ ಮತ್ತು ರಿಷಬ್ ಪಂತ್ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು.

 ಲಯ ಕಂಡುಕೊಂಡ ಭಾರತದ ಬೌಲರ್ ಗಳು

ಲಯ ಕಂಡುಕೊಂಡ ಭಾರತದ ಬೌಲರ್ ಗಳು

ಟೀಂ ಇಂಡಿಯಾ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗದೆ ತಂಡವಾಗಿ ಆಡುತ್ತಿದೆ. ಒಬ್ಬ ಆಟಗಾರ ವಿಫಲವಾದರೆ ಮತ್ತೊಬ್ಬ ಆಟಗಾರ ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಭಾರತದ ಬೌಲಿಂಗ್ ವಿಭಾಗ ಸಾಕಷ್ಟು ಸುಧಾರಣೆ ಕಂಡಿದೆ. ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜಾ ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+