ತರೀಕೆರೆ; ರಾಜ್ಯ ಮಟ್ಟದ ಹೊನಲು ಬೆಳಕಿನ ಜಂಗಿ ಕುಸ್ತಿ, ಮೈಸೂರು ಪೈಲ್ವಾನ್‌ಗೆ ಬೆಳ್ಳಿ ಗದೆ
ಚಿಕ್ಕಮಗಳೂರು, ಅಕ್ಟೋಬರ್, 09: ದೇಶೀಯ ಕ್ರೀಡೆ ಕುಸ್ತಿ ಅಂದರೆ ಸಾಕು ಅದರ ಖದರ್ ಬೇರೆ ಆಗಿರುತ್ತದೆ. ಕುಸ್ತಿಯಲ್ಲಿ ಪೈಲ್ವಾನರು ತೊಡೆ ತಟ್ಟಿ ಅಖಾಡ ಪ್ರವೇಶಿಸುತ್ತಿದ್ದರೆ ನೋಡುಗರು ಕೇಕೆ, ಸಿಳ್ಳೆಗಳನ್ನು ಹಾಕುತ್ತಿರುತ್ತಾರೆ. ಪೈಲ್ವಾನರಂತೂ ಗೆಲುವು ನಮ್ಮದೇ ಎಂಬ ದೃಢ ನಿರ್ಧಾರದಿಂದ ಎದುರಾಳಿ ವಿರುದ್ಧ ಅಖಾಡಕ್ಕೆ ಇಳಿದು ಸೆಣಸಾಡುತ್ತಿರುತ್ತಾರೆ.
ಹೀಗೆಯೇ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಗುರು ರೇವಣ್ಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ವತಿಯಿಂದ ಆಯೋಜಿಸಿದ್ದ ಜಂಗಿ ಕುಸ್ತಿ ಎಲ್ಲರ ಗಮನ ಸೆಳೆಯಿತು. ಪಂದ್ಯಾವಳಿಯಲ್ಲಿ ಪಂಜಾಬಿನ ರೀಕು ವಿರುದ್ಧ ಸೆಣಸಾಡಿ ಮೈಸೂರಿನ ಪೈಲ್ವಾನ್ ಯಶವಂತ್ ಬೆಳ್ಳಿ ಗದೆಯನ್ನು ಗೆದ್ದು ಸಂಭ್ರಮಿಸಿದ್ದಾರೆ.
ಮೈಸೂರಿನಿಂದ ಆಗಮಿಸಿದ್ದ ಪೈಲ್ವಾನ್ ಯಶವಂತ್ ಪಂಜಾಬ್ ಪೈಲ್ವಾನ್ ರಿಕು ವಿರುದ್ಧ ಜಯಶಾಲಿ ಆಗುವ ಮೂಲಕ ಬೆಳ್ಳಿ ಗದೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡರು. ಬೆಳ್ಳಿ ಗೆಲ್ಲುವ ಮೂಲಕ ಯಂಶವಂತ್ ರಾಜ್ಯದ ಘನತೆಯನ್ನು ಎತ್ತಿ ಹಿಡಿದಿದ್ದು, ಇವರಿಗೆ ಎಲ್ಲೆಡೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಕುಸ್ತಿ ಪಂದ್ಯದಲ್ಲಿ ಶಿವಮೊಗ್ಗ, ಹಾಸನ, ಹಾವೇರಿ, ಧಾರವಾಡ, ದಾವಣಗೆರೆ, ಕಲಬುರಗಿ, ಗದಗ, ಬಾಗಲಕೋಟೆ, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 250ಕ್ಕೂ ಅಧಿಕ ಪೈಲ್ವಾನರು ಭಾಗವಹಿಸಿದ್ದರು.

ತೊಡೆ ತಟ್ಟಿ ಅಖಾಡಕ್ಕೆ ನಿಂತಿದ್ದ ಕಲಿಗಳು
ಕೇವಲ ರಾಜ್ಯ ಮಾತ್ರವಲ್ಲದೇ ದೆಹಲಿ ಪೈಲ್ವಾನರು ಪಂದ್ಯಾವಳಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಜೋಡಿಗಳನ್ನು ಕೂಗುತ್ತಿದ್ದಂತೆ ತೊಡೆ ತಟ್ಟಿ ಅಖಾಡಕ್ಕೆ ನುಗ್ಗಿ ಬಿಟ್ಟರು ಗಟ್ಟಿ ಕಲಿಗಳು. ಹೀಗೆ ಅಖಾಡ ಪ್ರವೇಶಿಸುತ್ತಿದ್ದ ಪೈಲ್ವಾನರು ಬದ್ಧ ವೈರಿಗಳ ವಿರುದ್ಧ ಕಾದಾಡಿದರು. ಇನ್ನು ಈ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ಪೈಲ್ವಾನರಿಗೆ ಬೆಳ್ಳಿ ಗದೆ, ಬೆಳ್ಳಿ ಕಿರೀಟ ಸೇರಿದಂತೆ ವಿವಿಧ ಪದಕಗಳನ್ನು ನೀಡಲಾಯಿತು.

ಕುಸ್ತಿಪಟುಗಳು ಅನುಸರಿಸಿದ ಆಹಾರ?
ಕುಸ್ತಿಯ ತಯಾರಿಗೆಂದು ಪೈಲ್ವಾನರು ದಿನನಿತ್ಯ ಭರ್ಜರಿ ತಾಲೀಮು ಮಾಡಿ ತಮ್ಮ ದೇಹ ಹುರಿ ಮಾಡಿಕೊಂಡಿರುತ್ತಾರೆ. ಹಾಲು, ಮೊಟ್ಟೆ, ಚಿಕನ್, ಮಟನ್ ಹೀಗೆ ಪೌಷ್ಠಿಕಾಂಶಭರಿತ ಆಹಾರ ಪದಾರ್ಥಗಳನ್ನು ಸೇವನೆ ಮಾಡಿ ದೇಹವನ್ನು ಸದೃಡವಾಗಿ ಬೆಳೆಸಿ, ಅಖಾಡಕ್ಕೆ ತಯಾರಾಗುತ್ತಾರೆ ಎಂದು ಕುಸ್ತಿಪಟು ರಮೇಶ್ ತಿಳಿಸಿದರು.

ಯಾವುದೇ ತೊಂದರೆ ಆಗದಂತೆ ಅಖಾಡ ಸಿದ್ಧ
ಇತ್ತೀಚಿನ ದಿನಗಳಲ್ಲಿ ಕುಸ್ತಿಯಂತಹ ದೇಶೀಯ ಕ್ರೀಡೆಗಳು ಕಣ್ಮರೆ ಆಗುತ್ತಿವೆ. ಹಾಗಾಗಿ ಸುಮಾರು ವರ್ಷಗಳಿಂದ ಗುರು ರೇವಣ್ಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ಬಯಲು ಜಂಗಿ ಕುಸ್ತಿ ಪಂದ್ಯಾವಳಿ ನಡೆಸಿಕೊಂಡು ಬರಲಾಗುತ್ತಿದೆ. ಅಲ್ಲದೇ ಯಾವುದೇ ತೊಂದರೆಗಳು ಆಗದಂತೆ ಅಖಾಡವನ್ನು ಸಿದ್ಧಪಡಿಸಲಾಗಿತ್ತು. ಇನ್ನು ಈ ಜಂಗಿ ಕುಸ್ತಿ ನೋಡಲು ತರೀಕೆರೆ ಪಟ್ಟಣ ಅಲ್ಲದೇ ಸುತ್ತ ಮುತ್ತಲಿನ ಜಿಲ್ಲೆ, ರಾಜ್ಯಗಳಿಂದ ಜನರು ಆಗಮಿಸಿದ್ದರು.

ಬಯಲು ರಂಗಮಂದಿರದಲ್ಲಿ ಜಂಗಿ ಕುಸ್ತಿ
ಜಂಗಿ ಕುಸ್ತಿ ಆಯೋಜಕ ಶಿವಶಂಕರಪ್ಪ ಮಾತನಾಡಿ, "ಹಿಂದಿನ ಕಾಲದಿಂದಲೂ ಕುಸ್ತಿಯನ್ನು ತರೀಕೆರೆ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷ ನೂರಾರು ಕುಸ್ತಿಪಟುಗಳು ಪಂದ್ಯದಲ್ಲಿ ಭಾಗವಹಿಸಿದ್ದು, ವಿವಿಧ ಪದಕಗಳನ್ನು ಗೆದ್ದಿದ್ದಾರೆ. ತುಂಬಾ ಚೆನ್ನಾಗಿ ಮೂರು ದಿನಗಳ ಕಾಲ ಜನರು ಜಂಗಿ ಕುಸ್ತಿ ನೋಡಿ ಇಲ್ಲಿನ ಜನರು ಸಂತೋಷವನ್ನು ವ್ಯಕ್ತಪಡಿಸಿದರು" ಎಂದರು.
ಸ್ಥಳೀಯ ಉಮೇಶ್ ಮಾತನಾಡಿ, "ತರೀಕೆರೆಯಲ್ಲಿ ನಡೆದ ಜಂಗಿ ಕುಸ್ತಿ ರಾಜ್ಯದಲ್ಲೇ ದೊಡ್ಡ ಮಟ್ಟದ್ದಾಗಿದೆ. ಈ ಜಂಗಿ ಕುಸ್ತಿಯಲ್ಲಿ 200ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು. ಯಾವುದೇ ತೊಂದರೆಗಳು ಇಲ್ಲದೇ ಪಂದ್ಯಾವಳಿ ನಡೆದಿದ್ದು ತುಂಬಾ ಸಂತೋಷವಾಗುತ್ತಿದೆ" ಎಂದು ಹೇಳಿದರು.












Click it and Unblock the Notifications