T20 World Cup: ಎದುರಾಳಿಗಳಿಗೆ ಎಚ್ಚರಿಕೆ ಕೊಟ್ಟ ವೆಸ್ಟ್ ಇಂಡೀಸ್!
ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಈಗಾಗಲೆ ಸಿದ್ಧತೆ ಆರಂಭಿಸಿದ್ದು, ಅಭ್ಯಾಸ ಪಂದ್ಯಗಳು ನಡೆಯುತ್ತಿವೆ. ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್ ಈ ಬಾರಿ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ.
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಅಭ್ಯಾಸ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ವೆಸ್ಟ್ ಇಂಡೀಸ್ ತಂಡ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿತು. ಜೇಸನ್ ಚಾರ್ಲ್ಸ್ 31 ಎಸೆತಗಳಲ್ಲಿ 40 ರನ್ ಗಳಿಸಿದರೆ, ನಿಕೋಲಸ್ ಪೂರನ್ 25 ಎಸೆತಗಳಲ್ಲಿ 5 ಬೌಂಡರಿ, 8 ಭರ್ಜರಿ ಸಿಕ್ಸರ್ ಸಹಿತ 75 ರನ್ ಗಳಿಸಿದರು. ನಾಯಕ ರೋವ್ಮನ್ ಪೊವೆಲ್ 25 ಎಸೆತಗಳಲ್ಲಿ 52 ರನ್ ಗಳಿಸಿದರು, ಶೆರ್ಫಾನೆ ರುದರ್ ಫೋರ್ಡ್ 18 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 222 ರನ್ ಗಳಿಸುವ ಮೂಲಕ 35 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಅಭ್ಯಾಸ ಪಂದ್ಯದಲ್ಲೇ ಅಬ್ಬರಿಸಿರುವ ವೆಸ್ಟ್ ಇಂಡೀಸ್, ತಾನು ಈ ಬಾರಿ ಬಲಿಷ್ಠ ತಂಡ ಎನ್ನುವ ಸಂದೇಶ ರವಾನಿಸಿದೆ.
ಹೇಗಿದೆ ವೆಸ್ಟ್ ಇಂಡೀಸ್ ತಂಡ?
ವೆಸ್ಟ್ ಇಂಡೀಸ್ ತಂಡ ಈ ಬಾರಿ ಸಾಕಷ್ಟು ಬಲಿಷ್ಠವಾಗಿ ಕಾಣಿಸುತ್ತಿದೆ. ವಿಶ್ವದ ಬಹುತೇಕ ಲೀಗ್‌ಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಆಡುವ ಕಾರಣ, ಬಹುತೇಕ ಎಲ್ಲಾ ಎದುರಾಳಿ ತಂಡಗಳ ಆಟಗಾರರ ಬಗ್ಗೆ ಅರಿವಿದೆ. ಮುಖ್ಯವಾಗಿ ಈ ಬಾರಿ ತವರಿನಲ್ಲಿ ಪಂದ್ಯಾವಳಿ ಇರುವುದು ತಂಡಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ಆಂಡ್ರೆ ರಸೆಲ್, ರೋವ್ಮೆನ್ ಪೊವೆಲ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ಶೆರ್ಫಾನೆ ರುಥರ್ ಫೋರ್ಡ್ ತಂಡದ ಪ್ರಮುಖ ಬ್ಯಾಟಿಂಗ್ ಬಲವಾಗಿದ್ದಾರೆ. ಎಂತಹ ಎದುರಾಳಿಗಳನ್ನು ಸ್ಫೋಟಕ ಬ್ಯಾಟಿಂಗ್ ಮೂಲಕ ಸೋಲಿಸುವ ಶಕ್ತಿ ಕೆರಿಬಿನ್ ಬ್ಯಾಟರ್ ಗಳಿಗೆ ಇದೆ.
ಅಲ್ಜಾರಿ ಜೋಸೆಫ್, ಗುಡಕೇಶ್ ಮೊಟೆ, ಅಕೀಲ್ ಹೊಸೆನ್, ಶಮರ್ ಜೋಸೆಫ್ ಅಂತಹ ಬೌಲರ್ ಗಳು ತಂಡದಲ್ಲಿದ್ದಾರೆ. ಗುಡಕೇಶ್ ಮೊಟೆ ಮಾರಕ ಬೌಲರ್ ಆಗಿದ್ದು, ಸ್ಪಿನ್‌ಗೆ ನೆರವು ನೀಡುವ ಪಿಚ್‌ಗಳಲ್ಲಿ ಎದುರಾಳಿಗಳನ್ನು ತಬ್ಬಿಬ್ಬು ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ತವರಿನ ಅಂಗಳದ ಲಾಭ ಪಡೆದು ಮೂರನೇ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.












Click it and Unblock the Notifications