Suryakumar Yadav: 'ಕಾಂತಾರ' ಮನೆಯಲ್ಲಿ ಸೂರ್ಯಕುಮಾರ್ ಯಾದವ್ ವಾಸ್ತವ್ಯ!
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಸದ್ಯ ಉಡುಪಿ ಪ್ರವಾಸದಲ್ಲಿದ್ದಾರೆ. ಮಂಗಳವಾರ ಬೆಳಗ್ಗೆ ಉಡುಪಿ ಜಿಲ್ಲೆಯ ಕಾಪುವಿನ ಹೊಸ ಮಾರಿಗುಡಿಗೆ ಭೇಟಿ ಕೊಟ್ಟಿದ್ದ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಹರಕೆಯನ್ನು ತೀರಿಸಿದ್ದರು.
ಸೂರ್ಯ ಕುಮಾರ್ ಯಾದವ್ ಕರಾವಳಿಯ ಅಳಿಯ. ವರ್ಲ್ಡ್ ಕಪ್ ಟಿ20 ಮುಗಿಸಿ ಮಂಗಳೂರಿನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ.

ಕಾಪು ಮಾರಿಗುಡಿಯಲ್ಲಿ ಪತ್ನಿ ದೇವಿಶಾ ಜೊತೆ ಮಾರಿಯಮ್ಮ ಉಚ್ಚಂಗಿ ದೇವಿಯ ದರ್ಶನ ಪಡೆದರು. ದೇವಿಯ ಮುಂದೆ ಸೂರ್ಯ ಕುಮಾರ್ ಟೀಮ್ ಇಂಡಿಯಾದ ನಾಯಕನಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಕಾಂತಾರ ಮನೆಯಲ್ಲಿ ಸೂರ್ಯ
ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಉಡುಪಿಯಲ್ಲಿರುವ ರಾಧಾಕೃಷ್ಣ ಹೆರಿಟೇಜ್ ಬೀಚ್ ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ಇದನ್ನು 'ಕಾಂತಾರ' ಮನೆ ಎಂದು ಕೂಡ ಕರೆಯಲಾಗುತ್ತದೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಶೂಟಿಂಗ್‌ಗಾಗಿ ಈ ಮನೆಯನ್ನು ಬಳಸಿಕೊಳ್ಳಲಾಗಿದೆ. ಕಾಂತಾರ ಸಿನಿಮಾದಲ್ಲಿ ವಿಲನ್ ಪಾತ್ರಧಾರಿ ಅಚ್ಯುತ್ ಕುಮಾರ್ ಇರುವ ಮನೆ ಇದಾಗಿದೆ. ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಈ ಮನೆಯ ಮಾಲೀಕ ಇದನ್ನು ಕಾಂತಾರ ಮನೆ ಎಂದೇ ಪ್ರಚಾರ ಮಾಡುತ್ತಿದ್ದಾರೆ.
ಮೀನೂಟ ಸವಿದ ಸೂರ್ಯಕುಮಾರ್
ಕರಾವಳಿ ಎಂದರೆ ಮೀನೂಟ ಭಾರಿ ಪ್ರಸಿದ್ಧ, ಸೂರ್ಯಕುಮಾರ್ ಯಾದವ್ ಕೂಡ ಕರಾವಳಿ ಶೈಲಿಯ ಮೀನೂಟವನ್ನು ಸವಿದಿದ್ದು, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಕಾಂತಾರ ಮನೆಯ ಚಿತ್ರವನ್ನು ಕೂಡ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಕ್ರಿಕೆಟ್‌ನಿಂದ ವಿರಾಮ!
ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದ ಕೊನೆಯ ಓವರ್ ನಲ್ಲಿ ಅಮೋಘ ಕ್ಯಾಚ್ ಹಿಡಿದ ಸೂರ್ಯಕುಮಾರ್ ಯಾದವ್ ಭಾರತ ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಐಪಿಎಲ್, ವಿಶ್ವಕಪ್‌ನಲ್ಲಿ ಸತತವಾಗಿ ಆಡಿದ್ದ ಸೂರ್ಯಕುಮಾರ್ ಯಾದವ್ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.












Click it and Unblock the Notifications