ಭಾರತೀಯ ಫುಟ್ಬಾಲ್ ಸಂಸ್ಥೆಗೆ ಆಡಳಿತ ಬಿಟ್ಟುಕೊಟ್ಟ ಸುಪ್ರೀಂ; ಫೀಫಾ ನಿಷೇಧ ವಾಪಸ್?

ನವದಹಲಿ, ಆಗಸ್ಟ್ 22: ಭಾರತೀಯ ಫುಟ್ಬಾಲ್ ಸಂಸ್ಥೆ ಎಐಎಫ್‌ಎಫ್‌ನ ಆಡಳಿತವನ್ನು ಸುಪ್ರೀಂಕೋರ್ಟ್ ವಾಪಸ್ ಬಿಟ್ಟುಕೊಟ್ಟಿದೆ. ಫೀಫಾ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಎಐಎಫ್‌ಎಫ್ ಮೇಲಿನ ನಿಷೇಧವನ್ನು ಫೀಫಾ ತೆರವುಗೊಳಿಸುವ ಸಾಧ್ಯತೆ ಇದೆ. ಹಾಗೆಯೇ, ಮಹಿಳಾ ಅಂಡರ್-17 ವಿಶ್ವಕಪ್ ಆಯೋಜಿಸುವ ಅವಕಾಶವನ್ನು ಭಾರತ ಕಳೆದುಕೊಳ್ಳುವುದು ತಪ್ಪಲಿದೆ.

ಇಂದು ಸೋಮವಾರ ಎಐಎಫ್‌ಎಫ್‌ನ ಭವಿಷ್ಯದ ದಾರಿ ಏನು ಎಂದು ನಿರ್ಧರಿಸಲು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಸುಪ್ರೀಂ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿಯನ್ನು ರದ್ದು ಮಾಡಿ ಫುಟ್ಬಾಲ್ ಸಂಸ್ಥೆಗೆ ಅಧಿಕಾರ ಮರಳಿಸಬೇಕು. ಇಲ್ಲವಾದರೆ ಫೀಫಾ ನಿಷೇಧ ಮುಂದುವರಿದು ಭಾರತೀಯ ಫುಟ್ಬಾಲ್‌ಗೆ ಮಾರಕವಾಗುತ್ತದೆ ಎಂದು ಎಐಎಫ್‌ಎಫ್ ವಾದ ಮುಂದಿಟ್ಟಿತು.

ಇನ್ನೊಂದೆಡೆ, ಆಡಳಿತಗಾರರ ಸಮಿತಿ ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಫೀಫಾ ನಿಷೇಧ ಮುಂದುವರಿದರೂ ಸರಿ, ಸುಧಾರಣೆ ಕ್ರಮ ಮುಂದುವರಿಯಬೇಕು ಎಂದು ವಾದಿಸಿತು.

Supreme Court Gives back Administration to AIFF in Hope of FIFA Reverting The Suspension

ಅಂತಿಮವಾಗಿ ಸುಪ್ರೀಂಕೋರ್ಟ್ ತಾನು ನೇಮಿಸಿದ್ದ ಆಡಳಿತಗಾರರ ಸಮಿತಿಯನ್ನು ತತ್‌ಕ್ಷಣವೇ ರದ್ದು ಮಾಡಿ ಎಐಎಫ್‌ಎಫ್‌ಗೆ ಅಧಿಕಾರ ಮರಳಿಸಿತು. ಸದ್ಯ ಎಐಎಫ್‌ಎಫ್ ಚುನಾವಣೆ ನಡೆಯುವವರೆಗೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನಂದೋ ಧರ್ ಅವರೇ ಮುನ್ನಡೆಸಲಿದ್ದಾರೆ.

ಸೆಪ್ಟೆಂಬರ್ 15ರೊಳಗೆ ಚುನಾವಣೆ ನಡೆಸಲು ಮೊದಲು ನಿಶ್ಚಯಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ಇನ್ನೊಂದು ವಾರ ಹೆಚ್ಚು ಕಾಲಾವಕಾಶ ನೀಡಿದೆ. ಎಐಎಫ್‌ಎಫ್‌ಗೆ ಸೇರಿದ 36 ರಾಜ್ಯಗಳ ಫುಟ್ಬಾಲ್ ಸಂಸ್ಥೆಗಳ ಪ್ರತಿನಿಧಿಗಳಿರುವ ಮತದಾರರ ಪಟ್ಟಿ ಸಿದ್ಧಪಡಿಸಲು ಸೂಚಿಸಲಾಗಿದೆ. ರಿಟರ್ನಿಂಗ್ ಆಫೀಸರ್‌ಗಳನ್ನು ನ್ಯಾಯಾಲಯವೇ ನೇಮಕ ಮಾಡುತ್ತದೆ.

ಸುಧಾರಣೆ ಮುಖ್ಯ ಎಂದ ಸಿಒಎ

ಅಂಡರ್-17 ವಿಶ್ವಕಪ್ ನಮ್ಮ ಕೈತಪ್ಪಿದರೂ ಪರವಾಗಿಲ್ಲ, ಆದರೆ, ಭಾರತದಲ್ಲಿ ಫುಟ್ಬಾಲ್ ಕ್ಷೇತ್ರದ ಸುಧಾರಣೆ ಆಗುವುದು ಮುಖ್ಯ. ಹೀಗಾಗಿ, ಈಗಿನ ಸುಧಾರಣಾ ಹೆಜ್ಜೆಗಳಿಂದ ಹಿಂದಕ್ಕೆ ಸರಿಯಬಾರದು ಎಂದು ಆಡಳಿತಗಾರರ ಮಂಡಳಿಯು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತು.

Supreme Court Gives back Administration to AIFF in Hope of FIFA Reverting The Suspension

ಕುತೂಹಲವೆಂದರೆ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮತ್ತು ಮಾಜಿ ನಾಯಕ ಬೈಚುಂಗ್ ಭುಟಿಯಾ ಕೂಡ ಸುಪ್ರೀಂ ಕೋರ್ಟ್ ನೇಮಿತ ಸಿಇಎ ಅನಿಸಿಕೆಗೆ ಬೆಂಬಲ ನೀಡಿದ್ದಾರೆ. ಭಾರತ ಸ್ವಂತ ಬಲದಲ್ಲಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸುವ ಮಟ್ಟಕ್ಕೆ ಬಲವಾಗಿ ಬೆಳೆಯುವುದು ಅಗತ್ಯ ಇದೆ. ಅದಕ್ಕಾಗಿ ಈಗ ವಿಶ್ವಕಪ್ ಆಯೋಜನೆಯ ಅವಕಾಶ ಕೈತಪ್ಪಿದರೂ ಸಮಸ್ಯೆ ಇಲ್ಲ ಎಂದು ಭುಟಿಯಾ ಹೇಳಿದರು.

ಎಐಎಫ್‌ಎಫ್ ವಾದ

ಫೀಫಾ ಅಮಾನತು ಮಾಡಿರುವುದರಿಂದ ದೇಶದ ಫುಟ್ಬಾಲ್ ಕ್ಷೇತ್ರಕ್ಕೆ ಭಾರೀ ಹಿನ್ನಡೆಯಾಗುತ್ತದೆ. ಫುಟ್ಬಾಲ್ ಆಟಗಾರರ ಭವಿಷ್ಯಕ್ಕೆ ಸಂಚಕಾರ ಆಗುತ್ತದೆ ಎಂದು ಎಐಎಫ್‌ಎಫ್ ಪರ ವಕಾಲತ್ತು ವಹಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ವಾದ ಮುಂದಿಟ್ಟರು.

ಫೀಫಾ ಅಮಾನತು ಯಾಕೆ?

ಯಾವುದೇ ಅಧಿಕೃತ ಫುಟ್ಬಾಲ್ ಸಂಸ್ಥೆಯ ಆಡಳಿತ ವ್ಯವಹಾರದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ ಮಾನ್ಯತೆ ರದ್ದು ಮಾಡುವ ಹಕ್ಕು ಫೀಫಾಗೆ ಇದೆ. ಫೀಫಾ ಎಂಬುದು ಫುಟ್ಬಾಲ್‌ನ ಜಾಗತಿಕ ಸಂಸ್ಥೆ. 200ಕ್ಕೂ ಹೆಚ್ಚು ದೇಶಗಳ ಫುಟ್ಬಾಲ್ ಸಂಸ್ಥೆಗಳು ಇದರ ಅಧೀನದಲ್ಲಿ ಇವೆ.

ಭಾರತೀಯ ಫುಟ್ಬಾಲ್ ಸಂಸ್ಥೆ ಎಐಎಫ್‌ಎಫ್‌ನಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿತು. ಪ್ರಫುಲ್ ಪಟೇಲ್‌ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆಡಳಿತಗಾರರ ಸಮಿತಿ (ಸಿಒಎ) ನೇಮಕ ಮಾಡಿ ಎಐಎಫ್‌ಎಫ್ ಆಡಳಿತದ ಜವಾಬ್ದಾರಿ ನೀಡಿತು. ಇದು ಆಗಿದ್ದು 2022 ಮೇ 18ರಂದು. ಸೆಪ್ಟೆಂಬರ್‌ನೊಳಗೆ ಹೊಸ ಸಂವಿಧಾನ ತರಲು ಯೋಜಿಸಲಾಯಿತು.

ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿಯಲ್ಲಿ ಗಣ್ಯ ಆಟಗಾರರ ಸಂಖ್ಯೆ ಶೇ. 50ರಷ್ಟು ಇರುವಂತೆ ಹೊಸ ಕರಡು ಸಂವಿಧಾನದಲ್ಲಿ ನಿಶ್ಚಯಿಸಲಾಯಿತು. ಇದಕ್ಕೆ ಫೀಫಾ ಆಕ್ಷೇಪ ವ್ಯಕ್ತಪಡಿಸಿತು. ಈ ಆಟಗಾರರ ಸಂಖ್ಯೆ ಶೇ. 25ಕ್ಕೆ ಸೀಮಿತವಾಗಿರಬೇಕು ಎಂದು ಪಟ್ಟು ಹಿಡಿಯಿತು. ಆದರೆ, ಕರಡು ಸಂವಿಧಾನದಲ್ಲಿದ್ದ ರೀತಿಯಲ್ಲೇ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿತು. ಇದು ಫೀಫಾ ಎಐಎಫ್‌ಎಫ್ ಅನ್ನೇ ಅಮಾನತು ಮಾಡಲು ಕಾರಣವಾಯಿತು.

ಫೀಫಾ ನಿಷೇಧದ ಎಫೆಕ್ಟ್

ಅಮಾನತುಗೊಂಡ ಫುಟ್ಬಾಲ್ ಸಂಸ್ಥೆಯ ಯಾವ ತಂಡವೂ ಕೂಡ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಆಗುವುದಿಲ್ಲ. ಏಷ್ಯಾ ಕಪ್‌ಗೆ ಅರ್ಹತೆ ಪಡೆದಿರುವ ಭಾರತ ತಂಡಕ್ಕೆ ಎರಡು ಅಭ್ಯಾಸ ಪಂದ್ಯಗಳು ರದ್ದುಗೊಂಡಿವೆ. ಅಂಡರ್-17 ಮಹಿಳಾ ವಿಶ್ವಕಪ್ ಅನ್ನು ಭಾರತವೇ ಆತಿಥ್ಯ ವಹಿಸಿದೆ. ಭಾರತೀಯ ಮಹಿಳಾ ಫುಟ್ಬಾಲ್‌ಗೆ ಇದು ಐತಿಹಾಸಿಕ ಘಳಿಗೆಯ ಅವಕಾಶ. ಇದು ಈಗ ರದ್ದಾಗುವ ಭೀತಿ ಇದೆ.

ಹಾಗೆಯೇ, ಭಾರತದ ಫುಟ್ಬಾಲ್ ಕ್ಲಬ್‌ಗಳು ಎಎಫ್‌ಸಿ ಟೂರ್ನಿಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರಿಂದ ಸ್ಥಳೀಯ ಫುಟ್ಬಾಲ್ ಬೆಳವಣಿಗೆ ಕುಂಠಿತಗೊಳ್ಳುವ ಅಪಾಯ ಇದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+