ಮಂಡ್ಯ; ಆಗಸ್ಟ್ 13ರಂದು ರಾಜ್ಯಮಟ್ಟದ ಗಾಳಿಪಟ ಉತ್ಸವ
ಮಂಡ್ಯ, ಆಗಸ್ಟ್ 11; ಮಂಡ್ಯದಲ್ಲಿ ಆಗಸ್ಟ್ 13ರಂದು ರಾಜ್ಯ ಮಟ್ಟದ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ. 250ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. 33ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವ ಇದಾಗಿದ್ದು, ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಹಾಗೂ ಮಂಡ್ಯ ಜಿಲ್ಲಾ ಘಟಕದ ಸಹಯೋಗದೊಂದಿಗೆ ರಾಜ್ಯಮಟ್ಟದ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ.

ಆಗಸ್ಟ್ 13ರ ಭಾನುವಾರ ಬೆಳಗ್ಗೆ 10.30ಕ್ಕೆ ಮಂಡ್ಯದ ಆದಿ ಚುಂಚನಗಿರಿಯ ಬಿ. ಜಿ. ಎಸ್ ಕ್ರೀಡಾಂಗಣದಲ್ಲಿ 33ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವ ನಡೆಯಲಿದೆ. ಉತ್ಸವಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ತಿಳಿಸಿದ್ದಾರೆ.
250 ಸ್ಪರ್ಧಿಗಳು ಭಾಗಿ; ಆದಿಚುಂಚನಗಿರಿಯ ಬಿ. ಜಿ. ಎಸ್ ಸಭಾಂಗಣದಲ್ಲಿ ನಡೆಯುವ 33ನೇ ರಾಜ್ಯ ಮಟ್ಟದ ಗಾಳಿಪಟ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ನಂದೀಶ್ ಮಾತನಾಡಿದರು. ಉತ್ಸವದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದರು.
ಉತ್ಸವದ ಕುರಿತು ಮಾಹಿತಿ ನೀಡಿದ ಅವರು, "ಈ ಉತ್ಸವದಲ್ಲಿ 250ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ 9 ಗಂಟೆಗೆ ನೋಂದಣಿ ಪ್ರಾರಂಭವಾಗಲಿದೆ. ಉತ್ಸವದಲ್ಲಿ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೇರಗು ನೀಡಲಿದೆ" ಎಂದರು.
"ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡುವ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತದೆ. ಗಾಳಿಪಟ ಸಿದ್ಧಪಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ವಸತಿ, ಊಟದ ವ್ಯವಸ್ಥೆ, ವಾಹನ ನಿಲುಗಡೆ, ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆಯು ವ್ಯವಸ್ಥಿತವಾಗಿ ನಡೆಯಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾದ್ಯಕ್ಷ ಡಿ. ಪಿ. ಸ್ವಾಮಿ ಮಾತನಾಡಿ, "ಗಾಳಿಪಟ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಮಕ್ಕಳು ಹಾಗೂ ಯುವ ಪೀಳಿಗೆಗೆ ಪರಿಚಯಿಸಿ ಉಳಿಸಬೇಕಾಗಿದೆ" ಎಂದರು.
ಈ ಉತ್ಸವದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವಿ. ಕೆ. ರಾವ್ ಮತ್ತು ತಂಡದವರು ಭಾಗವಹಿಸಿ ವೈವಿದ್ಯಮಯ ಹಾಗೂ ಸಾಮಾಜಿಕ ಕಳಕಳಿಯ ಸಂದೇಶ ಸಾರುವ ಗಾಳಿಪಟಗಳನ್ನು ಹಾರಿಸಲಿದ್ದಾರೆ.
ಈ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಪೊಲೀಸ್ ಅಧಿಕಾರಿ ನಿರಂಜನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್. ಹೆಚ್. ನಿರ್ಮಲ ಪಾಲ್ಗೊಂಡಿದ್ದರು.












Click it and Unblock the Notifications