India vs Sri Lanka: ಭಾರತದ ವಿರುದ್ಧ ಗೆದ್ದ ಶ್ರೀಲಂಕಾ; ರೋಹಿತ್ ಪಡೆ ಸೋಲಿಗೆ ಕಾರಣವೇನು?
ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ಮೊದಲ ಸೋಲಿನ ರುಚಿ ತೋರಿಸಿದೆ ಶ್ರೀಲಂಕಾ. ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭಾರತದ ವಿರುದ್ಧ 32 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ ಏಕದಿನ ಪಂದ್ಯ ಟೈ ಆದ ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಸೋಲಿನ ಆಘಾತ ಎದುರಾಗಿದೆ. ಟಿ20 ವಿಶ್ವಕಪ್ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮಾ ಅವರಿಗೆ ಇದು ಮೊದಲ ಸೋಲಾಗಿದೆ.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಉತ್ತಮ ಬೌಲಿಂಗ್ ದಾಳಿಯ ನಡುವೆಯೂ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು.
ಆವಿಷ್ಕ ಫರ್ನಾಂಡೋ 40 ರನ್, ಕುಸಾಲ್ ಮೆಂಡಿಸ್ 32 ರನ್, ಕಮಿಂದು ಮೆಂಡಿಸ್ 40 ರನ್, ದುನಿತ್ ವೆಲ್ಲಲಗೆ 39 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.
ಕೈಕೊಟ್ಟ ಭಾರತದ ಬ್ಯಾಟಿಂಗ್ ಪಡೆ
241 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಭಾರತ ಅತ್ಯುತ್ತಮ ಆರಂಭ ಪಡೆಯಿತು. ಮತ್ತೊಮ್ಮೆ ಅಬ್ಬರಿಸಿದ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 5 ಬೌಂಡರಿ 4 ಸಿಕ್ಸರ್ ಸಹಿತ 64 ರನ್ ಗಳಿಸಿದರು. ಶುಭಮನ್ ಗಿಲ್ 44 ಎಸೆತಗಳಲ್ಲಿ 35 ರನ್ ಗಳಿಸಿದರು.
ಇವರಿಬ್ಬರು ಔಟಾದ ಬಳಿಕ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಅಕ್ಷರ್ ಪಟೇಲ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ವಿರಾಟ್ ಕೊಹ್ಲಿ 14 ರನ್ ಗಳಿಸಿದರೆ, ಶಿವಂ ದುಬೆ ಮತ್ತು ಕೆಎಲ್ ರಾಹುಲ್ ಸೊನ್ನೆಗೆ ಔಟಾದರು. ಅಂತಿಮವಾಗಿ ಭಾರತ 42.2 ಓವರ್ ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಶ್ರೀಲಂಕಾ ಪರವಾಗಿ ಜೆಫ್ರೆ ವಂದೆರ್ಸೆ 10 ಓವರ್ ಗಳಲ್ಲಿ 33 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಭಾರತದ ಸೋಲಿಗೆ ಕಾರಣವಾದರು. ನಾಯಕ ಚರಿತ್ ಅಸಲಂಕ ಕೂಡ 3 ವಿಕೆಟ್ ಪಡೆದು ಮಿಂಚಿದರು. 3 ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 1-0 ಮುನ್ನಡೆ ಸಾಧಿಸಿದ್ದು, ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಕೈತಪ್ಪಿದೆ. ಮುಂದಿನ ಪಂದ್ಯ ಭಾರತ ಗೆದ್ದರೆ ಸರಣಿ ಸಮಬಲವಾಗಲಿದ್ದು, ಸೋತರೆ ಶ್ರೀಲಂಕಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆ.












Click it and Unblock the Notifications