Virat Kohli: ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಲು ನಾನು ಕಾರಣವಲ್ಲ: ಸೌರವ್ ಗಂಗೂಲಿ ಮಹತ್ವದ ಹೇಳಿಕೆ
ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವವನ್ನು ತ್ಯಜಿಸಿದಾಗ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಕ್ರಿಕೆಟ್ ಹಿರಿಯರು ಮತ್ತು ಬಿಸಿಸಿಐ ಮೇಲೆ ಆರೋಪಗಳನ್ನು ಮಾಡಲಾಯಿತು.
ವಿರಾಟ್ ಕೊಹ್ಲಿ ಮೇಲೆ ಒತ್ತಡ ಹಾಕಿ ಬಲವಂತದಿಂದ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎನ್ನುವ ದೂರುಗಳು ಸಹ ಕೇಳಿಬಂದವು. ಇದೇ ವಿಚಾರಕ್ಕೆ ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ ಮತ್ತು ಕೊಹ್ಲಿ ನಡುವೆ ಸಂಬಂಧ ಹಳಸಿತ್ತು ಎನ್ನುವ ವಾದಗಳು ಇದ್ದವು. 2023 ಐಪಿಎಲ್‌ನಲ್ಲಿ ಇದಕ್ಕೆ ಪುಷ್ಠಿಕೊಡುವ ಘಟನೆಗಳು ಕೂಡ ನಡೆದಿದ್ದವು.

ಎಲ್ಲಾ ಊಹಾಪೋಹಗಳ ನಡುವೆ ಬಿಸಿಸಿಐ ಮಾಜಿ ಅಧ್ಯಕ್ಷ, ಮಾಜಿ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದರೆ. ಕೊಹ್ಲಿ ನಾಯಕತ್ವ ತ್ಯಜಿಸಿದ ಸಂದರ್ಭದ ವಸ್ತು ಸ್ಥಿತಿಯನ್ನು ಹಂಚಿಕೊಂಡಿದ್ದು, ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಸೌರವ್ ಗಂಗೂಲಿ ಹೇಳಿದ್ದೇನು?
ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವುದರಲ್ಲಿ ತಾವು ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. 2021ರಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ತ್ಯಜಿಸಿದ್ದರು. ಒಂದು ಕಾಲದಲ್ಲಿ ಕೊಹ್ಲಿಯ ನಾಯಕತ್ವದ ಪದಚ್ಯುತಿಗೆ ಅಭಿಮಾನಿಗಳು ಸೌರವ್ ಗಂಗೂಲಿಯನ್ನು ಹೊಣೆಗಾರರನ್ನಾಗಿ ಮಾಡಿದ್ದರು.
ಈಗ ಸೌರವ್ ಗಂಗೂಲಿ ಅವರ ಹೇಳಿಕೆ ಮತ್ತೆ ಈ ವಿವಾದವನ್ನು ಮುನ್ನಲೆಗೆ ತಂದಿದೆ. ಗಂಗೂಲಿ ಅವರ ಸ್ಪಷ್ಟನೆಯು ಕೊಹ್ಲಿಯನ್ನು ನಾಯಕತ್ವದಿಂದ ನಿರ್ಗಮಿಸಲು ಯೋಜಿಸಿದವರು ಯಾರು ಎಂಬ ಪ್ರಶ್ನೆಯನ್ನು ಮತ್ತೆ ತಂದಿದ್ದು, ಅಭಿಮಾನಿಗಳಲ್ಲಿ ಗೊಂದಲವನ್ನು ಹುಟ್ಟುಹಾಕಿದೆ.
ದಾದಾಗಿರಿ ಅನ್‌ಲಿಮಿಟೆಡ್ ಸೀಸನ್ 10, ರಿಯಾಲಿಟಿ ಶೋನಲ್ಲಿ ಮಾತನಾಡಿರುವ ಸೌರವ್ ಗಂಗೂಲಿ ಅವರು ಊಹಾಪೋಹಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಗಂಗೂಲಿ ಪ್ರಕಾರ, ಟಿ20 ಸ್ವರೂಪವನ್ನು ಮುನ್ನಡೆಸಲು ಸ್ವತಃ ಕೊಹ್ಲಿ ಆಸಕ್ತಿ ಹೊಂದಿರಲಿಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ, ಸೌರವ್ ಗಂಗೂಲಿ ವೈಟ್-ಬಾಲ್ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಲು ಸಲಹೆ ನೀಡಿದರು ಮತ್ತು ಕೊಹ್ಲಿ ಸ್ವಯಂಪ್ರೇರಣೆಯಿಂದ ಟಿ20, ಏಕದಿನ ಮತ್ತು ಟೆಸ್ಟ್ ಸ್ವರೂಪಗಳಾದ್ಯಂತ ನಾಯಕತ್ವದಿಂದ ಕೆಳಗಿಳಿದರು.
ಈ ನಿರ್ಧಾರವು ತಂಡದ ಬ್ಯಾಟ್ಸ್‌ಮನ್ ಆಗಿ ಕೊಡುಗೆ ನೀಡುವಲ್ಲಿ ಗಮನಹರಿಸುವ ಕೊಹ್ಲಿಯ ಆದ್ಯತೆಯೊಂದಿಗೆ ಹೊಂದಾಣಿಕೆಯಾಗಿದೆ. ಗಂಗೂಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದು ಕೊಹ್ಲಿಯ ನಾಯಕತ್ವದ ನಿರ್ಗಮನದ ಸಂದರ್ಭಗಳ ವಿಚಾರದಲ್ಲಿ ಇದ್ದ ಗೊಂದಲಗಳನ್ನು ಬಗೆಹರಿಸಲಿದೆ ಎನ್ನಲಾಗಿದೆ.
"ನಾನು ವಿರಾಟ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿಲ್ಲ. ಇದನ್ನು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಅವರಿಗೆ ಟಿ20ಯಲ್ಲಿ ನಾಯಕತ್ವ ವಹಿಸಲು ಆಸಕ್ತಿ ಇರಲಿಲ್ಲ. ಆದ್ದರಿಂದ, ಅವರು ಆ ನಿರ್ಧಾರವನ್ನು ತೆಗೆದುಕೊಂಡ ನಂತರ, ನಾನು ಅವರಿಗೆ ಹೇಳಿದೆ, ನಿಮಗೆ ಟಿ20 ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸಲು ಆಸಕ್ತಿ ಇಲ್ಲದಿದ್ದರೆ, ನೀವು ಸಂಪೂರ್ಣ ಬಿಳಿ-ಬಾಲ್ ಕ್ರಿಕೆಟ್‌ನಿಂದ ಹಿಂದೆ ಸರಿಯುವುದು ಉತ್ತಮ. ಟೆಸ್ಟ್ ತಂಡದ ನಾಯಕತ್ವ ಇರಲಿ ಎಂದಿದ್ದೆ" ಎಂದು ಬಿಸಿಸಿಐ ಮಾಜಿ ಮುಖ್ಯಸ್ಥ ಗಂಗೂಲಿ ಹೇಳಿದ್ದಾರೆ.
ನಡೆಯುತ್ತಿರುವ ಚರ್ಚೆಗಳು ಮತ್ತು ಊಹೆಗಳ ಮಧ್ಯೆ, ಗಂಗೂಲಿ ಅವರ ವಿವರಣೆಯು ಕೊಹ್ಲಿಯ ನಾಯಕತ್ವದ ನಿರ್ಗಮನದ ಬಗ್ಗೆ ಕ್ರಿಕೆಟ್ ಉತ್ಸಾಹಿಗಳಲ್ಲಿ ಹರಡಿರುವ ದೀರ್ಘಕಾಲದ ಪ್ರಶ್ನೆಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ.












Click it and Unblock the Notifications