Smriti Mandhana: ಹರ್ಮನ್‌ಪ್ರೀತ್ ಕೌರ್ ಔಟ್.. ಸ್ಮೃತಿ ಮಂಧಾನ ಯಾಕೆ ಭಾರತ ಮಹಿಳಾ ತಂಡದ ನಾಯಕಿಯಾಗಬೇಕು?
Smriti Mandhana: ಹರ್ಮನ್‌ಪ್ರೀತ್ ಕೌರ್ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿದಿದ್ದು, ಈ ಜವಾಬ್ದಾರಿಯನ್ನು ಸ್ಮೃತಿ ಮಂಧಾನ ಅವರಿಗೆ ವಹಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕೂ ಕಾರಣ ಕೂಡ ಇದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.
ಭಾರತ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ತಂಡದ ಮುಂದಿನ ಸಾರಥಿ ಯಾರಾಗಲಿದ್ದಾರೆ ಎಂಬ ಚರ್ಚೆ ತೀವ್ರಗೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲಗಳ ಪ್ರಕಾರ, ಪ್ರಸ್ತುತ ಉಪನಾಯಕಿಯಾಗಿರುವ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.

ಮಂಧಾನ ಆಯ್ಕೆಗೆ ಪ್ರಮುಖ ಕಾರಣಗಳು
* ಸ್ಮೃತಿ ಮಂಧಾನ ಕಳೆದ ಹಲವು ವರ್ಷಗಳಿಂದ ಭಾರತ ತಂಡದ ಪ್ರಮುಖ ಬ್ಯಾಟರ್ ಹಾಗೂ ಉಪನಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಹಂಗಾಮಿ ನಾಯಕಿಯಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಸಿದ ಅನುಭವವನ್ನು ಹೊಂದಿದ್ದಾರೆ.
* ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕಿಯಾಗಿ ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ ಅನುಭವ ಇವರಿಗಿದೆ.
* ಮೈದಾನದಲ್ಲಿ ಒತ್ತಡದ ಪರಿಸ್ಥಿತಿಗಳನ್ನು ಶಾಂತತೆಯಿಂದ ನಿಭಾಯಿಸುವ ಹಾಗೂ ಯುವ ಆಟಗಾರ್ತಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಸಾಮರ್ಥ್ಯ ಹೊಂದಿದ್ದಾರೆ.
* ಜಾಗತಿಕ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಂಧಾನ, ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಬಲ್ಲ ಸಮರ್ಥ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹರ್ಮನ್‌ಪ್ರೀತ್ ಅವರ ನಿರ್ಧಾರವನ್ನು ಗೌರವಿಸಿರುವ ಭಾರತೀಯ ಮಹಿಳಾ ಕ್ರಿಕೆಟ್‌ನ ಮಾಜಿ ದಿಗ್ಗಜರು, 'ಹರ್ಮನ್‌ಪ್ರೀತ್ ನಾಯಕತ್ವದ ಯುಗ ಮುಗಿದಿದ್ದು, ಸ್ಮೃತಿ ಮಂಧಾನ ಅವರ ರೂಪದಲ್ಲಿ ಅತ್ಯಂತ ಶಾಂತ ಮತ್ತು ತಾಂತ್ರಿಕವಾಗಿ ಪ್ರಬುದ್ಧ ಸಾರಥಿಯ ನೂತನ ಅಧ್ಯಾಯ ಆರಂಭವಾಗಲಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ವಿಶ್ಲೇಷಕರು ಹೇಳೋದೇನು?
ಹಲವು ಕ್ರಿಕೆಟ್ ದಿಗ್ಗಜರು, 'ತಂಡದಲ್ಲಿ ಜೂನಿಯರ್ ಮತ್ತು ಸೀನಿಯರ್ ಆಟಗಾರ್ತಿಯರ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳಲು ಸ್ಮೃತಿ ಮಂಧಾನ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಮುಂದಿನ ಪ್ರಮುಖ ಐಸಿಸಿ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸಲು ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವ ನೀಡುವುದು ಸೂಕ್ತ,' ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.
ತಂಡದ ಯುವ ಆಟಗಾರ್ತಿಯರು ಹಾಗೂ ಹಿರಿಯ ಸದಸ್ಯರು ಹರ್ಮನ್‌ಪ್ರೀತ್ ಅವರ ನಾಯಕತ್ವದ ಕೊಡುಗೆಗೆ ಧನ್ಯವಾದ ಅರ್ಪಿಸಿದ್ದು, ಸ್ಮೃತಿ ಮಂಧಾನ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಳೆದ ಕೆಲ ತಿಂಗಳುಗಳಿಂದಲೂ ಸಹ ಹರ್ಮನ್ ಪ್ರೀತ್ ಅವರು ನಾಯಕತ್ವ ತ್ಯಜಿಸಿದರೆ, ಅವರ ಸ್ಥಾನಕ್ಕೆ ಸ್ಮೃತಿ ಮಂಧಾನ ಅವರೇ ಸೂಕ್ತ ಆಯ್ಕೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಲಿವೆ. ಅದರಂತೆಯೇ ಇದೀಗ ಬಿಸಿಸಿಐ ಶಿಘ್ರದಲ್ಲೇ ಸ್ಮೃತಿ ಅವರನ್ನು ಮೂರು ಮಾದರಿಗೂ ನಾಯಕಿಯನ್ನಾಗಿ ಘೋಷಿಸುವ ಸಾಧ್ಯತೆಯಿದೆ.
ಸ್ಮೃತಿ ಮಂಧಾನ ಯಾಕೆ ನಾಯಕಿಯಾಗಬೇಕು?
* ತಂಡದಲ್ಲಿ ಹಿರಿಯ ಆಟಗಾರ್ತಿಯಾಗಿ ಅನುಭವ ಹೊಂದಿರುವ ಮಂಧಾನ, ಜೂನಿಯರ್ ಆಟಗಾರ್ತಿಯರೊಂದಿಗೆ ಅತ್ಯಂತ ಆಪ್ತವಾಗಿ ಬೆರೆಯುತ್ತಾರೆ. ಮೈದಾನದಲ್ಲಿ ಯುವ ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ತುಂಬುವುದು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಅವರ ಗುಣವು ತಂಡದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ನೆರವಾಗಲಿದೆ.
* ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವವು ತೀವ್ರ ಆಕ್ರಮಣಕಾರಿಯಾಗಿದ್ದರೆ, ಸ್ಮೃತಿ ಮಂಧಾನ ಅವರ ಶೈಲಿ ಅತ್ಯಂತ ಶಾಂತ ಹಾಗೂ ಯೋಜನಾಬದ್ಧವಾಗಿದೆ. ಮೈದಾನದಲ್ಲಿ ಎಷ್ಟೇ ಒತ್ತಡದ ವಾತಾವರಣವಿದ್ದರೂ ಕಂಗಾಲಾಗದೆ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಅವರ ಗುಣವು ಭಾರತ ತಂಡಕ್ಕೆ ಹೊಸ ಆಯಾಮ ನೀಡಲಿದೆ. ಮುಂಬರುವ ಪ್ರಮುಖ ಸರಣಿಗಳು ಹಾಗೂ ಐಸಿಸಿ ಟೂರ್ನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಬಿಸಿಸಿಐ ಶೀಘ್ರದಲ್ಲೇ ಸ್ಮೃತಿ ಮಂಧಾನ ಅವರನ್ನು ಮೂರೂ ಮಾದರಿಯ ಕ್ರಿಕೆಟ್‌ಗೆ ಭಾರತ ಮಹಿಳಾ ತಂಡದ ನಾಯಕಿಯಾಗಿ ಅಧಿಕೃತವಾಗಿ ಘೋಷಿಸುವ ನಿರೀಕ್ಷೆಯಿದೆ.


Click it and Unblock the Notifications
